ರಾಷ್ಟ್ರದಲ್ಲಿ ಹೈಸ್ಪೀಡ್ ಟ್ರೇನ್ ಕಾರಿಡಾರ್ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆಗೆ ಮುಂದಾಗಿರುವ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಮಂಗಳವಾರ ಜಪಾನಿನ ಟೊಕಿಯೋದ ಬುಲೆಟ್ ಟ್ರೇನ್‌ನಲ್ಲಿ ಒಂದು ಸುತ್ತು ಸವಾರಿ ಮಾಡಿದರು.ರೈಲ್ವೇಯ ಹಿರಿಯ ಅಧಿಕಾರಿಗಳೊಂದಿಗೆ ವೇಗದ ರೈಲಿನ ಪ್ರಯಾಣದ ರುಚಿಯನ್ನು ಲಾಲೂ ನೋಡಿದರು. ಗಂಟೆಯೊಂದರ ಸುಮಾರು 300 ಕಿ.ಮೀ ವೇಗದಲ್ಲಿ ಸಾಗುವ ಟೊಕಿಯೋದಿಂದ ಕ್ಯೂಟೋಗೆ ತೆರಳುವ ಶಿಂಕಾನ್ಸೇನ್ ಎಂಬ ಹೆಸರಿನ ಬುಲೆಟ್ ರೈಲನ್ನು ಸಚಿವರು ಸ್ಥಳೀಯ ಕಾಲಮಾನ ಮುಂಜಾನೆ 9.10ಕ್ಕೆ ಏರಿದರು.515 ಕಿಲೋಮೀಟರ್ ಅಂತರದ ದೂರವನ್ನು ಈ ಬುಲೆಟ್ ಟ್ರೇನ್ ಕೇವಲ ಎರಡು ಗಂಟೆ ಇಪ್ಪತ್ತು ನಿಮಿಷಗಳಲ್ಲಿ ಕ್ರಮಿಸುತ್ತದೆ. ಸಂಜೆಯಲ್ಲಿ ಲಾಲೂ ತಂಡವು ಶಿನ್-ಕೋಬೆ ಎಂಬ ಇನ್ನೊಂದು ಬುಲೆಟ್ ರೈಲಿನಲ್ಲಿ ಪ್ರಯಾಣಿಸಲಿದೆ. ಅಲ್ಲದೆ, ಬುಧವಾರ ಲಾಲೂ ಆಂಡ್ ಕೋ ಶಿನ್-ಒಸಾಕದಿಂದ ಟೊಕಿಯೋಗೆ ಶಿಂಕಾನ್ಸೇನ್ ರೈಲಿನಲ್ಲಿ ಪ್ರಯಾಣಿಸಲಿದೆ.ಡೆಡಿಕೇಟೆಡ್ ಫ್ರೈಟ್ ಕಾರಿಡಾರ್(ಡಿಎಫ್‌ಸಿ)ಗಾಗಿ ಸಾಲದ ಕುರಿತು ವಿಸ್ತೃತ ಚರ್ಚೆಗಾಗಿ ಸಚಿವರು ಸಚಿವಾಲಯದ ತಂಡವನ್ನು ಜಪಾನಿಗೆ ಕರೆದೊಯ್ದಿದ್ದಾರೆ.ಏತನ್ಮಧ್ಯೆ, ದೆಹಲಿ-ಚಂಢೀಗಢ-ಅಮೃತಸರ ದಾರಿಯಲ್ಲಿ ಹೈಸ್ಪೀಡ್ ರೈಲು ಓಡಿಸಲು ಪೂರ್ವ ಅಧ್ಯಯನಕ್ಕಾಗಿ ರೈಲ್ವೇ ಇಲಾಖೆಯು ಜಾಗತಿಕ ಟೆಂಡರ್ ಕರೆದಿದೆ. ಈ ಅಧ್ಯಯನದಲ್ಲಿ ಯೋಜನೆಯ ಕುರಿತ ತಾಂತ್ರಿಕ, ಆರ್ಥಿಕ ಹಾಗೂ ಕಾರ್ಯಾಚರಣೆಯ ಕುರಿತು ವಿಚಾರಗಳು ಒಳಗೊಂಡಿವೆ.ಇದಲ್ಲದೆ, ಪುಣೆ-ಮುಂಬೈ-ಅಹಮದಾಬಾದ್, ಹೈದರಾಬಾದ್-ದೊರ್ನಕಲ್-ವಿಜಯವಾಡ-ಚೆನ್ನೈ, ಚೆನ್ನೈ-ಬೆಂಗಳೂರು-ಕೊಯಂಬುತ್ತೂರು-ಎರ್ನಾಕುಲಂ ಮತ್ತು ಹೌರಾ-ಹಲ್ದಿಯಾ ದಾರಿಗಳಲ್ಲೂ ಹೈಸ್ಪೀಡ್ ರೈಲು ಓಡಿಸುವ ಕುರಿತು ಅಧ್ಯಯನ ನಡೆಸಲೂ ರೈಲ್ವೆ ಇಲಾಖೆ ನಿರ್ಧರಿಸಿದೆ. |