ನುಂಗುವವರು ಬೇಕಾಗಿದ್ದಾರೆ! ಆಶ್ಚರ್ಯಪಡಬೇಕಿಲ್ಲ. ಮಾದಕ ದ್ರವ್ಯ ಕಳ್ಳಸಾಗಾಣಿಕೆಗಾಗಿ ಈ ಕಾಳದಂಧೆಕೋರರು ಕಂಡುಕೊಂಡಿರುವ ಹೊಸ ಮಾರ್ಗವಿದು. ಮಾದಕ-ದ್ರವ್ಯ ನಿರೋಧಕ ವಿಭಾಗದ ಅಧಿಕಾರಿಗಳನ್ನು ಈ ಸಂಗತಿ ಅಚ್ಚರಿಯಲ್ಲಿ ಕೆಡಹಿದೆ.
ಮಾದಕ ದ್ರವ್ಯ ಕಳ್ಳಸಾಗಣಿಕೆದಾರರ ಈ ಹೊಸ ವರಸೆಯ ಪ್ರಕಾರ, ಅವರೆಲ್ಲರೂ 'ದೇಹ ಟೊಳ್ಳು' ಆಗಿರುವ ನುಂಗಣ್ಣಗಳಿಗಾಗಿ ಶೋಧ ಮಾಡುತ್ತಿದ್ದಾರೆ. ಕಾಲದಿಂದ ಕಾಲಕ್ಕೆ ತಮ್ಮ ಕಾರ್ಯತಂತ್ರಗಳನ್ನು ಬದಲಿಸುತ್ತಾ ಇರುವ ಕಾಳದಂಧೆಕೋರರು, ಕೊಕೇನ್, ಹೆರಾಯ್ನ್ ಮತ್ತಿತರ ಮಾದಕವಸ್ತುಗಳನ್ನು ಹೊಂದಿರುವ ಮಾತ್ರೆಗಳನ್ನು ನುಂಗುತ್ತಾರೆ ಇಲ್ಲವೇ, 'ಮಾನವ ಕೊರಿಯರ್' ದೇಹದೊಳಗೆ ಈ ಮಾದಕವಸ್ತುಗಳನ್ನು ತುಂಬಿರುವ ಮಾತ್ರೆಗಳನ್ನು ತೂರಿಸುತ್ತಾರೆ.
'ಹಿಂದೆಯೂ ಇಂಥ ವಿಧಾನವನ್ನು ಬಳಸಲಾಗುತ್ತಿತ್ತು. ಆದರೆ ಕೆಲವೊಂದು ಸಂಕೀರ್ಣತೆಗಳಿಂದಾಗಿ ಅದು ಯಶಸ್ವಿಯಾಗಿರಲಿಲ್ಲ. ಆದರೆ ಈಗ ವಿಶೇಷ ತಂತ್ರಜ್ಞಾನ ಮತ್ತು ಸುಧಾರಿತ ಪ್ಯಾಕೇಜಿಂಗ್ ವಸ್ತುಗಳ ಲಭ್ಯತೆಯಿಂದಾಗಿ, ಕಳ್ಳಸಾಗಣೆದಾರರು ಶಂಕೆಯಿಂದ ನುಣುಚಿಕೊಳ್ಳಲು, ಬಂಧನ ತಪ್ಪಿಸಿಕೊಳ್ಳಲು ಮರಳಿ ಈ ವಿಧಾನಕ್ಕೆ ಮೊರೆ ಹೋಗಿದ್ದಾರೆ' ಎಂದು ಮಾದಕದ್ರವ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ಆಗಿದ್ದರೆ, ವ್ಯಕ್ತಿಯೊಬ್ಬ 5ರಿಂದ 8 ಗ್ರಾಂ ಮಾದಕ ದ್ರವ್ಯ ಒಳಗೊಂಡ 20ರಿಂದ 25 ಮಾತ್ರೆಗಳನ್ನು ನುಂಗಬೇಕಾಗುತ್ತಿತ್ತು. ಅಲ್ಲದೆ, ಮಾನವ ಸಾಗಾಟದಾರ (ಕೊರಿಯರ್) ಕೆಲಸ ಮಾಡುವ ವ್ಯಕ್ತಿಯ ಹಿಂಭಾಗದಲ್ಲಿ ಸುಮಾರು 10ರಷ್ಟು ಮಾತ್ರೆಗಳನ್ನು ಒಳತೂರಿಸಲಾಗುತ್ತಿತ್ತು. ಈ ಮಾತ್ರೆಗಳನ್ನು ಕೂಡ ಸಾಮಾನ್ಯ ವಸ್ತುಗಳಿಂದ ಮಾಡಲಾಗುತ್ತಿತ್ತು. ಇದನ್ನು ಒಯ್ಯುವವರು ಯಾವುದನ್ನೂ ತಿನ್ನಬಾರದು ಅಥವಾ ಕುಡಿಯಬಾರದಾಗಿತ್ತು. ನಡೆಯುವಾಗ ಕೂಡ ಆತ ಅಸ್ವಸ್ಥನಾಗಿರುವ ಭಾವನೆ ಉಂಟಾಗುತ್ತಿತ್ತು. ಹೀಗಾಗಿ ಅಧಿಕಾರಿಗಳಿಗೆ ಆತನನ್ನು ಪತ್ತೆ ಹಚ್ಚುವುದು ಸುಲಭವಾಗುತ್ತಿತ್ತು.
ಈಗ ಕಳ್ಳಸಾಗಣೆದಾರರಿಗೆ ಅತ್ಯಾಧುನಿಕ ಉಪಕರಣಗಳು ದೊರೆತಿವೆ. ಈ 'ಪ್ರೆಸಿಂಗ್ ಮೆಶಿನ್'ಗಳ ಮೂಲಕ ಒಂದು ಮಾತ್ರೆಯೊಳಗೆ 15ರಿಂದ 18 ಗ್ರಾಂನಷ್ಟು ಮಾದಕದ್ರವ್ಯದ ಪುಡಿಯನ್ನು ಸುಲಭವಾಗಿ ಸೇರಿಸಬಹುದಾಗಿದೆ. ದಂತದ ಮೇಣದೆಣ್ಣೆ (ಡೆಂಚರ್ ಪ್ಯಾರಾಫಿನ್)ಯನ್ನೂ ಬಳಸುವುದರಿಂದಾಗಿ ಈ ಮಾತ್ರೆಗಳು ತೀರಾ ತೆಳುವಾಗಿರುತ್ತವೆ. |