ಪಾಕಿಸ್ತಾನವು ಮುಂಬೈ ತನಿಖೆಗೆ ಸಹಕರಿಸದೇ ಇದ್ದರೆ, ಅದರೊಂದಿಗಿನ ವಾಣಿಜ್ಯ, ಸಾರಿಗೆ ಮತ್ತು ಪ್ರವಾಸಿ ಸಂಪರ್ಕಗಳನ್ನು ಭಾರತವು ಕಡಿದುಕೊಳ್ಳಬಹುದು ಎಂಬುದಾಗಿ ಗೃಹಸಚಿವ ಪಿ.ಚಿದಂಬರಂ ಹೇಳಿದ್ದಾರೆ.
"ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವು, ಹಲವು ಸಂಪರ್ಕಗಳಿವೆ. ಒಂದೊಮ್ಮೆ ಪಾಕಿಸ್ತಾನವು ಮುಂಬೈ ತನಿಖೆಯ ರೂವಾರಿಗಳನ್ನು ಕಾನೂನಿನ ಕಟಕಟೆಗೆ ತರಲು ಸಹಕರಿಸದಿದ್ದರೆ, ಈ ಸಂಬಂಧಗಳು ದುರ್ಬಲವಾಗುತ್ತಲೇ ಹೋಗಲಿದ್ದು, ಒಂದು ದಿನ ಸಂಪೂರ್ಣ ತಟಸ್ಥವಾಗಲಿದೆ ಎಂದು ಅವರು ದಿ ಟೈಮ್ಸ್ ದೈನಿಕಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
"ನಾವ್ಯಾಕೆ ಪಾಕಿಸ್ತಾನಿ ವಣಿಕರನ್ನು ಉತ್ತೇಜಿಸಬೇಕು? ನಾವ್ಯಾಕೆ ಅಲ್ಲಿನ ಪ್ರವಾಸಿಗಳನ್ನು ಭಾರತದಲ್ಲಿ ಉತ್ತೇಜಿಸಬೇಕು? ನಾವ್ಯಾಕೆ ನಮ್ಮ ಪ್ರವಾಸಿಗಳನ್ನು ಅಲ್ಲಿಗೆ ಕಳುಹಿಸಬೇಕು?" ಎಂಬುದಾಗಿ ಸಚಿವರು ಪ್ರಶ್ನಿಸಿದ್ದಾರೆ.
ಇಂತಹ ಕ್ರಮಗಳನ್ನು ಯಾವಾಗ ಕೈಗೊಳ್ಳಲಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ನಮಗೆ ಕ್ಷಿಪ್ರ ಸ್ಪಂದನ ಬೇಕಾಗಿದೆ ಎಂದು ನುಡಿದರು.
ಪಾಕಿಸ್ತಾನವು ತನಿಖೆಗೆ ಯಾವ ರೀತಿ ಸಹಕರಿಸುತ್ತಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು "ಸೊನ್ನೆ, ಅವರೇನು ಒದಗಿಸಿದ್ದಾರೆ? ಏನೂ ಇಲ್ಲ" ಎಂದರು. |