ಭದ್ರತಾ ಪಡೆಗಳು ಹೊಸ ನಮೂನೆಯ ಭಯೋತ್ಪಾದನೆಯ ಇನ್ನೊಂದು ಮುಖವನ್ನು ಪತ್ತೆಮಾಡಿದೆ. ಗಡಿನಿಯಂತ್ರಣ ರೇಖೆಯನ್ನು ದಾಟಿದ ಯುವತಿಯೊಬ್ಬಳು ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರಗಾಮಿ ತರಬೇತಿ ಶಿಬಿರಗಳಲ್ಲಿ ನೂರಾರು ಮಹಿಳೆಯರು ತರಬೇತಿ ಪಡೆಯುತ್ತಿದ್ದಾರೆ ಎಂಬ ಆಘಾತಕಾರಿ ವಿಚಾರವನ್ನು ಬಹಿರಂಗ ಪಡಿಸಿದ್ದಾಳೆ.
ಮಹಿಳಾ ತರಬೇತು ಕೇಂದ್ರಗಳಲ್ಲಿ 700ಕ್ಕಿಂತಲೂ ಅಧಿಕ ಮಹಿಳೆಯರು ತರಬೇತಿ ಪಡೆಯುತ್ತಿದ್ದಾರೆ ಎಂದು 23ರ ಹರೆಯದ ಆಸಿಯಾ ಎಂಬಾಕೆ ತಿಳಿಸಿದ್ದಾಳೆ. ಉಗ್ರಗಾಮಿ ತರಬೇತಿ ಶಿಬಿರದಲ್ಲಿ ಅಕ್ರಮ ನುಸುಳುವಿಕೆಯ ತರಬೇತು ಪಡೆದ ಈಕೆ ಪಾಕಿಸ್ತಾನಿ ಸೇನಾ ಹವಾಲ್ದಾರ್ ಮೊಹಮ್ಮದ್ ಸಜ್ಜದ್ ಎಂಬಾತನ ಪತ್ನಿ.
ರಾಜೌರಿಯಲ್ಲಿ ಗಡಿನಿಯಂತ್ರಣ ರೇಖೆಯನ್ನು ಅಕ್ರಮವಾಗಿ ದಾಟಿದ ಆಸಿಯಾ ನೂರಾರು ಮಹಿಳೆಯರು ಯಾವ ರೀತಿ ತರಬೇತಿ ಪಡೆಯುತ್ತಾರೆ ಎಂಬುದನ್ನು ಹೇಳಿದ್ದಾಳೆಂದು ಸಿಎನ್ಎನ್-ಐಬಿಎನ್ ವಾಹಿನಿ ವರದಿ ಮಾಡಿದೆ.
ಮುಜಾಹಿದಿಗಳು ಮಹಿಳೆಯರೊಂದಿಗೆ ತರಬೇತಿ ಪಡೆಯುವುದು ಬಿಮಾರ್ ಶಿಬಿರದಲ್ಲಿ ತಾನು ಕಂಡಿದ್ದೇನೆ. ಅಲ್ಲಿ 700ಕ್ಕಿಂತಲೂ ಹೆಚ್ಚು ಮಹಿಳೆಯರಿದ್ದರು. ಅಲ್ಲಿ ಗುಂಡುಹಾರಿಸುವ ಕುರಿತು ತರಬೇತಿ ನೀಡಲಾಗುತ್ತಿತ್ತು. ಆದರೆ ಗುಂಡು ಹಾರಿಸುವುದು ತನಗೆ ಗೊತ್ತಿಲ್ಲ ಎಂದು ಆಕೆ ಹೇಳಿದ್ದಾಳೆ.
ಗಡಿನಿಯಂತ್ರಣ ರೇಖೆಯಲ್ಲಿ ನಿಯೋಜಿತರಾಗಿರುವ ಭಾರತೀಯ ಸೇನಾಪಡೆಗಳಿಂದ ಮಾಹಿತಿ ಸಂಗ್ರಹಿಸಲು ಆಸಿಯಾಳನ್ನು ನಿಯೋಜಿಸಲಾಗಿತ್ತು ಎಂದು ಹೇಳಲಾಗಿದೆ. ಪಾಕಿಸ್ತಾನದ ಸೇನೆ ಮತ್ತು ಗುಪ್ತಚರ ಸಂಸ್ಥೆಗಳು ಉಗ್ರಗಾಮಿಗಳಿಗೆ ತರಬೇತಿ ನೀಡುತ್ತಾರೆ ಎಂಬುದಾಗಿ ಆಕೆ ತನ್ನ ತಪ್ಪೊಪ್ಪಿಗೆಯಲ್ಲಿ ಹೇಳಿದ್ದಾರೆ. |