ಕಳೆದ ಭಾನುವಾರದಿಂದ ಕಾಣೆಯಾಗಿದ್ದ ಮುಂಬೈ ದಾಳಿಕೋರರನ್ನು ಕಣ್ಣಾರೆ ಕಂಡಿರುವ ಮಹಿಳೆ ನಸುಕಿಗೂ ಮುಂಚಿನ ಅವಧಿಯಲ್ಲಿ ತನ್ನ ಮನೆಗೆ ಹಿಂತಿರುಗಿದ್ದಾರೆ.
26/11ರ ದಾಳಿಯ ವೇಳೆಗೆ ಭದ್ರತಾ ಪಡೆಗಳ ಗುಂಡಿಗೆ ಈಡಾಗಿ ಸಾವನ್ನಪ್ಪಿದ್ದ ಒಂಬತ್ತು ಉಗ್ರರ ದೇಹವನ್ನು ಗುರುತಿಸಿದ್ದ ಅನಿತಾ ಉದಯ್ ತನ್ನ ಮನೆಗೆ ಹಿಂತಿರುಗಿದ್ದಾರೆ ಎಂಬುದಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ವೆಂಕಟೇಸಮ್ ತಿಳಿಸಿದ್ದಾರೆ.
ಮಧ್ಯರಾತ್ರಿ 1.30ರ ವೇಳೆಗೆ ಮನೆಗೆ ಹಿಂತಿರುಗಿದ್ದಾರೆ. ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಅವರನ್ನು ಪೊಲೀಸ್ ಠಾಣೆಗೆ ಒಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಅವರು ಎಲ್ಲಿ ಹೋಗಿದ್ದರು ಎಂಬುದು ತಿಳಿದಿಲ್ಲ. ಮತ್ತು ನಂತರದಲ್ಲಿ ಅವರನ್ನು ಇನ್ನಷ್ಟು ಪ್ರಶ್ನಿಸಲಾಗುವುದು ಎಂದು ಹೇಳಿದ್ದಾರೆ.
ಮುಂಬೈದಾಳಿ ನಡೆಸಿದ ನವೆಂಬರ್ 26ರಂದು ದೋಣಿ ಇಳಿದು ಬರುತ್ತಿದ್ದ ಉಗ್ರರನ್ನು 47ರ ಹರೆಯದ ಅನಿತಾ ಗಮನಿಸಿದ್ದರು. ಅವರು ನಗರದ ಜೆಜೆ ಆಸ್ಪತ್ರೆಯಲ್ಲಿ ಇವರ ಮೃತದೇಹವನ್ನು ಗುರುತಿಸಿದ್ದರು. ಅನಿತಾ ಭಾನುವಾರದಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಪುತ್ರಿ ಸೀಮಾ ಕೇತನ್ ಜೋಶಿ ತಿಳಿಸಿದ್ದಾರೆ.
ಮೀನುಗಾರ ಕಾಲೋನಿಯ ಕಪ್ಪೆ ಪರಡೆ ಎಂಬಲ್ಲಿನ ನಿವಾಸಿಯಾಗಿರುವ ಅನಿತಾ ಅವರು ತನ್ನ ಮನೆಯ ಸಮೀಪ ದೋಣಿಯೊಂದರಲ್ಲಿ ಇದ್ದ ವೇಳೆ ಉಗ್ರರು ಬಂದಿಳಿದಿದ್ದರು. ಭಾರವಾದ ಬ್ಯಾಗುಗಳನ್ನು ಹೊಂದಿದ್ದ ಉಗ್ರರನ್ನು ಕಂಡು ಸಂಶಯಗೊಂಡ ಅನಿತಾ ನೀವೆಲ್ಲಿಗೆ ಹೋಗುತ್ತಿದ್ದೀರಿ ಎಂಬುಬಾಗಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಉಗ್ರರು, "ನಿಮಗೇನು ಚಿಂತೆ, ನಿಮ್ಮ ಕೆಲಸ ನೋಡಿಕೊಳ್ಳಿ" ಎಂಬ ಉಡಾಫೆಯ ಉತ್ತರ ನೀಡಿದ್ದರು ಎಂದು ಹೇಳಲಾಗಿದೆ. |