ಸಮಾಜವಾದಿ ಪಕ್ಷದಿಂದ ಚುನಾವಣೆಗೆ ಸ್ಫರ್ಧಿಸುವ ತನ್ನ ಸಹೋದರ ಸಂಜಯ್ ದತ್ತ್ ನಿರ್ಧಾರ ಅವರ ವೈಯಕ್ತಿಕ ನಿಲುವು ಎಂದು ಸ್ಪಷ್ಟಪಡಿಸಿರುವ ಕಾಂಗ್ರೆಸ್ ಸಂಸದೆ, ಈ ಕುರಿತು ತಮ್ಮ ಕುಟುಂಬದಲ್ಲಿ ಯಾವುದೇ ಒಡಕಿಲ್ಲ ಎಂದು ಹೇಳಿದ್ದಾರೆ.
"ಚುನಾವಣೆಗಳಲ್ಲಿ ಸ್ಫರ್ಧಿಸಬೇಕೇ ಎಂಬುದು ಮತ್ತು ಯಾವ ಪಕ್ಷದಿಂದ ಸ್ಫರ್ಧಿಸಬೇಕು ಎಂಬುದು ಅವರ ವೈಯಕ್ತಿಕ ಆಯ್ಕೆ. ನಾನು ಬೆಂಬಲಿಸುತ್ತೇನೆಯೋ ಇಲ್ಲವೋ ಎಂಬುದು ಬೇರೆ ವಿಚಾರ. ನಮ್ಮ ಕುಟುಂಬದಲ್ಲಿ ನಾವೆಲ್ಲ ಸ್ವಯಂ ಆಗಿ ನಿರ್ಧಾರಗಳನ್ನು ಕೈಗೊಂಡು ಅದರ ಜವಾಬ್ದಾರಿ ಹೊರುತ್ತೇವೆ" ಎಂಬುದಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾ ಹೇಳಿದ್ದಾರೆ.
ಸಂಜಯ್ ದತ್ ಕುರಿತು ಕಾಂಗ್ರೆಸ್‌ಗೆ ಹಿತವಿಲ್ಲದ ಕಾರಣ ಅವರು ಸಮಾಜವಾದಿ ಪಕ್ಷವನ್ನು ಆಯ್ದುಕೊಳ್ಳಬೇಕಾಯಿತು ಎಂಬುದು ಸರಿಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಂಜಯ್ ಸಮಾಜವಾದಿ ಪಕ್ಷ ಸೇರುವುದು ವಿಶಾದನೀಯ ಎಂಬುದಾಗಿ ಪ್ರಿಯಾ ಮಂಗಳವಾರ ಹೇಳಿಕೆ ನೀಡಿದ್ದರು. ಅಲ್ಲದೆ ಮಾನ್ಯತಾ ತನ್ನ ಸಹೋದರನ ಹಾದಿ ತಪ್ಪಿಸುತ್ತಿದ್ದಾರೆ ಎಂದೂ ಹೇಳಿದ್ದರು. ಇದಲ್ಲದೆ, ಸಮಾಜವಾದಿ ಪಕ್ಷದ ಅಮರ್ ಸಿಂಗ್ ತಮ್ಮ ಕುಟುಂಬವನ್ನು ಒಡೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದೂ ದೂರಿದ್ದರು.
ಆದರೆ ಬುಧವಾರದಂದು ಹೊಸ ರಾಗ ಹಾಡಿರುವ ಪ್ರಿಯಾ, ಸಂಜಯ್ ಸ್ಫರ್ಧೆ ಕುರಿತ ತನ್ನ ಹಿಂದಿನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಬುಧವಾರ ಸ್ಪಷ್ಟೀಕರಣ ನೀಡಿದ್ದಾರೆ. |