ಕಾರ್ಪೋರೆಟ್ ವಲಯದ ದಿಗ್ಗಜರಾಗಿರುವ ಅನಿಲ್ ಅಂಬಾನಿ ಹಾಗೂ ಸುನಿಲ್ ಭಾರತಿ ಮಿತ್ತಲ್ ಅವರು ಬುಧವಾರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಹಾಡಿಹಾಡಿ ಹೊಗಳಿ ಅಟ್ಟದ ಮೇಲೆ ಕೂರಿಸಿದ್ದು, ಅವರ ನಾಯಕತ್ವ ರಾಷ್ಟ್ರಮಟ್ಟದ ಅಂಶವಾಗಿದೆ ಎಂದು ಹೇಳಿದ್ದಾರೆ.
ನಾಲ್ಕನೆಯ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಇನ್ವೆಸ್ಟರ್ಸ್ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅಂಬಾನಿ, ನರೇಂದ್ರಭಾಯ್ ಗುಜರಾತಿಗೆ ಒಳಿತನ್ನು ಮಾಡಿದ್ದಾರೆ. ಹಾಗಿರುವಾಗ ಅವರು ರಾಷ್ಟ್ರದ ನೇತೃತ್ವ ವಹಿಸಿದರೆ ಏನಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
"ಮೋದಿ ನಾಯಕತ್ವದಲ್ಲಿ ಗುಜರಾತ್ ಸರ್ವಾಂಗೀಣ ಅಭಿವೃದ್ಧಿ ಕಂಡಿದೆ. ಹಾಗಿರುವಾಗ ಅವರು ರಾಷ್ಟ್ರದ ನಾಯಕತ್ವ ವಹಿಸಿದಲ್ಲಿ ಏನಾಗುತ್ತದೆ. ಇವರಂತಹ ವ್ಯಕ್ತಿಗಳೇ ರಾಷ್ಟ್ರದ ಮುಂದಿನ ನಾಯಕರಾಗಬೇಕು" ಎಂಬುದಾಗಿ ಅಂಬಾನಿ ಹೇಳಿದ್ದಾರೆ.
"ಮೋದಿ ಲಂಬೀ ರೇಸ್ ಕಾ ಘೋಡಾ ಹೈ"(ಮೋದಿ ಸುದೀರ್ಘ ಹಾದಿಯಲ್ಲಿ ಸಾಗಲಿದ್ದಾರೆ) ಎಂಬುದಾಗಿ ತನ್ನ ತಂದೆ ಧೀರೂಭಾಯ್ ಅಂಬಾನಿ ಹೇಳುತ್ತಿದ್ದರು ಎಂಬುದನ್ನು ಅವರು ಈ ಸಂದರ್ಭದಲ್ಲಿ ಅವರು ನೆನಪಿಸಿಕೊಂಡರು.
ಸಮ್ಮೇಳನದಲ್ಲಿ ಭಾಗವಹಿಸಿದ್ದ ಭಾರತಿ ಮಿತ್ತಲ್ ಅವರೂ ಸಹ ಅಂಬಾನಿ ದಾಟಿಯಲ್ಲೇ ಮಾತನಾಡಿದ್ದು, ಮೋದಿಯನ್ನು ಹೊಗಳದೆ ಬಿಡಲಿಲ್ಲ. "ಮುಖ್ಯಮಂತ್ರಿ ಮೋದಿ ಅವರನ್ನು ಒಬ್ಬ ಸಿಇಓ ಎನ್ನಲಾಗುತ್ತಿದೆ. ಆದರೆ ಅವರು ನಿಜವಾಗಿ ಅವರು ಸಿಇಓ ಅಲ್ಲ, ಯಾಕೆಂದರೆ ಅವರು ಯಾವುದೇ ಕಂಪೆನಿ ಇಲ್ಲವೇ ವಲಯವನ್ನು ಮುನ್ನಡೆಸುತ್ತಿಲ್ಲ. ಅವರು ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಹಾಗಾಗಿ ಅವರು ರಾಷ್ಟ್ರವನ್ನೂ ಮುನ್ನಡೆಸಬಹುದು ಎಂದು ನುಡಿದರು.
ಕಳೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಚುನಾವಣೆಯಲ್ಲಿ ಮೋದಿ ಅಭೂತಪೂರ್ವ ಗೆಲವು ಸಾಧಿಸಿದ್ದ ವೇಳೆ ಅವರು ಮುಂದಿನ ಪ್ರಧಾನಿ ಎಂಬಂತಹ ಮಾತುಗಳು ಕೇಳಿಬಂದಿದ್ದವು. ತಕ್ಷಣವೇ ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ ಎಂದು ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಹೇಳಿದ್ದರು.
ಒಟ್ಟಿನಲ್ಲಿ ಅದ್ಯಾಕೋ ಎಲ್.ಕೆ.ಆಡ್ವಾಣಿಯವರ ಪ್ರಧಾನಿಯಾಗೋ ಆಸೆ ಅಷ್ಟು ಸುಲಭದಲ್ಲಿ ನೆರವೇರುವಂತಿಲ್ಲ. ಚುನಾವಣೆ ಸಮೀಪಿಸುತ್ತಿರುವಂತೆ ಮಾಜಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ಅವರು ತಾನೂ ಸ್ಫರ್ಧೆಯಲ್ಲಿದ್ದೇನೆ ಎಂಬ ಸೂಚನೆ ನೀಡಿದ್ದರು.
ಇದೀಗ ಈ ಉದ್ಯಮಿಗಳು ನೀಡಿರುವ ಹೇಳಿಕೆ ಇನ್ನೊಂದು ಸಂಚಲನೆ ಮೂಡಿಸುವ ಎಲ್ಲಾ ಸಾಧ್ಯತೆಗಳು ಇವೆ. |