ಹಣಕಾಸು ಅವ್ಯವಹಾರದಿಂದ ಬಿಕ್ಕಟ್ಟಿಗೆ ಬಿದ್ದಿರುವ ಸತ್ಯಂ ಕಂಪ್ಯೂಟರ್ಸ್‌ಗೆ ಯಾವುದೇ ನೆರವಿನ ಪ್ಯಾಕೇಜ್ ನೀಡುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಗುರುವಾರ ತಳ್ಳಿಹಾಕಿದೆ. ಆದರೆ ಆದರ ಜವಾಬ್ದಾರಿಯ ಚೌಕಟ್ಟಿನೊಳಗೆ ಸಂಸ್ಥೆಯ ಸಿಬ್ಬಂದಿಗಳ ಉದ್ಯೋಗವನ್ನು ಉಳಿಸಿಕೊಳ್ಳಲು ಸಾಧ್ಯ ಇರುವ ಎಲ್ಲವನ್ನೂ ಮಾಡುವುದಾಗಿ ತಿಳಿಸಿದೆ.
"ಹೊಸದಾಗಿ ನೇಮಕವಾಗಿರುವ ಮಂಡಳಿಯು ಈ ನಿರ್ಧಾರವನ್ನು ಕೈಗೊಳ್ಳಬೇಕಿದೆ. ಈ ಸರ್ಕಾರವು ಸತ್ಯಂನ ವಂಚನೆಯನ್ನು ಸರಿಪಡಿಸಲು ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಯಾವುದೇ ಸಹಾಯಧನ ನೀಡದು ಎಂಬುದಾಗಿ ಉದ್ಯಮ ಇಲಾಖಾ ರಾಜ್ಯ ಸಚಿವ ಅಶ್ವನಿ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸರ್ಕಾರವು ಸತ್ಯಂಗೆ ಹಣಕಾಸು ಸಹಾಯ ಒದಗಿಸಲಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ಮಂಡಳಿಯು ಇದನ್ನು ನಿರ್ಧರಿಸಬೇಕು. ಸರ್ಕಾರವು ತನ್ನ ಜವಾಬ್ದಾರಿಯ ಚೌಕಟ್ಟಿನೊಳಗೆ ಉದ್ಯೋಗಿಗಳ ಸಂರಕ್ಷಣೆ ಹಾಗೂ ಕಾರ್ಪೋರೇಟ್ ವಲಯದಲ್ಲಿ ಭಾರತದ ಉತ್ತಮ ಹೆಸರನ್ನು ರಕ್ಷಿಸಲು ಅಗತ್ಯವಿರುವುದನ್ನು ಮಾಡಲಿದೆ ಎಂದು ಅವರು ನುಡಿದರು.
ಆದರೆ, ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡಿರುವ ವಾಣಿಜ್ಯ ಸಚಿವ ಕಮಲ್ ನಾಥ್ ಅವರು ಸತ್ಯಂ ಕಂಪ್ಯೂಟರ್‌ಗೆ ಹಣಕಾಸು ಸಹಾಯ ನೀಡುವ ಕುರಿತು ಸರ್ಕಾರವು ಮುಕ್ತವಾಗಿದೆ ಎಂದು ಹೇಳಿದ್ದಾರೆ. ಅವರು ಪ್ರಧಾನಿಯವರ ಪರಾಮರ್ಷೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. |