ಜಮ್ಮು ಕಾಶ್ಮೀರ ಪೊಲೀಸ್ ವಿಶೇಷ ಡಿಜಿಪಿ ರಾಧ ವಿನೋದ್ ರಾಜು ಅವರನ್ನು ನೂತನವಾಗಿ ರಚಿಸಲಾದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ)ಯ ಪ್ರಧಾನ ನಿರ್ದೇಶಕರನ್ನಾಗಿ ಸರ್ಕಾರ ಗುರವಾರ ನೇಮಿಸಿದೆ.
1975ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ 59 ವರ್ಷದ ರಾಜು 2010, ಜನವರಿ 21ರವೆರೆಗೆ ಎನ್ಐಎಯ ಮುಖ್ಯಸ್ಥರಾಗಿರುತ್ತಾರೆ ಎಂದು ಅಧಿಕೃತ ವಕ್ತಾರರೊಬ್ಬರು ತಿಳಿಸಿದ್ದಾರೆ. ಭಯೋತ್ಪಾದನೆ ಪೀಡಿತ ಜಮ್ಮು ಕಾಶ್ಮೀರದ ನಿಗಾ ಇಲಾಖೆಯ ಮುಂದಾಳತ್ವವನ್ನು ರಾಜು ವಹಿಸಿದ್ದರು.
ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ ತನಿಖೆ ಸೇರಿದಂತೆ ಕಗ್ಗಂಟಿನ ಪ್ರಕರಣದ ತನಿಖೆ ನಡೆಸುವ ಅನುಭವ ಹೊಂದಿರುವ ರಾಜು ಅವರ ವಿಸ್ತೃತ ಜ್ಞಾನ ಮತ್ತು ಅನುಭವದ ಹಿನ್ನೆಲೆಯಲ್ಲಿ ಅವರನ್ನು ಎನ್ಎಐನ ಪ್ರಧಾನ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.
ಗೃಹ ಸಚಿವ ಪಿ ಚಿದಂಬರಂ ರಾಜುರ ಹೆಸರನ್ನು ಶಿಫಾರಸು ಮಾಡಿದರು ಮತ್ತು ಅದಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ನೇಮಕಾತಿಗಳ ಸಂಪುಟ ಸಮಿತಿ ಅನುಮೋದನೆ ನೀಡಿತು.
ಕೇಂದ್ರದಲ್ಲಿನ ನಿಯೋಜನೆಗೆ ಅನುಕೂಲವಾಗುವಂತೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಹಾ ಅವರು ಈ ಅಧಿಕಾರಿಯನ್ನು ರಾಜ್ಯ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶವನ್ನು ಹೊರಡಿಸಿದ್ದಾರೆ. ಈ ವರ್ಷ ಜುಲೈ 31ರಂದು ಅವರು ನಿವೃತ್ತಿಯಾಗಬೇಕಾಗಿತ್ತು. |