ಮುಂಬೈ ದಾಳಿಯ ರೂವಾರಿಗಳನ್ನು ಭಾರತೀಯ ನೆಲದ ಕಾನೂನು ರೀತ್ಯಾ ವಿಚಾರಿಸಬೇಕು ಎಂಬುದಾಗಿ ಹೇಳುತ್ತಾ ಬಂದಿದ್ದ, ಭಾರತ ಇದೀಗ ತನ್ನ ನಿಲುವು ಬದಲಿಸಿದೆಯೇ? ಹೌದು ಎನ್ನುವಂತಹ ಹೇಳಿಕೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆನ್ನಲಾಗಿದೆ. ಉಗ್ರರನ್ನು ಭಾರತಕ್ಕೆ ಒಪ್ಪಿಸಲು ಯಾವುದಾದರೂ ಕಾರಣಗಳು ಅಡ್ಡಿಯಾಗುತ್ತಿದ್ದರೆ ಅವರನ್ನು ಪಾಕಿಸ್ತಾನವು ನ್ಯಾಯೋಚಿತ ತನಿಖೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.
ಭಾರತೀಯ ರಾಷ್ಟ್ರಭ್ರಷ್ಟರು ಭಾರತೀಯ ಕಾನೂನನ್ನು ಎದುರಿಸಬೇಕು. ಭಾರತದ ವಿರುದ್ಧ ಅಪರಾಧವೆಸಗಿದವರನ್ನು ಭಾರತಕ್ಕೆ ಒಪ್ಪಿಸಬೇಕು. ಒಂದೊಮ್ಮೆ ಅದು ಸಾಧ್ಯವಾಗದಿದ್ದಲ್ಲಿ, ಪಾಕಿಸ್ತಾನದಲ್ಲಿ ಅಂತಹವರ ವಿರುದ್ಧ ಪಾರದರ್ಶಕ ವಿಚಾರಣೆ ನಡೆಸಬೇಕು ಎಂದು ಪ್ರಣಬ್ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆನ್ನಲಾಗಿದೆ.
ಏತನ್ಮಧ್ಯೆ, ಪಾಕಿಸ್ತಾನವು ಭಾರತ ಒದಗಿಸಿರುವ ಪುರಾವೆಗಳ ಕುರಿತು ಒಂದು ವಾರದೊಳಗಾಗಿ ಔಪಚಾರಿಕ ಉತ್ತರ ನೀಡಲಿದೆ ಎಂದು ಪಾಕಿಸ್ತಾನದ ಮಾಧ್ಯಮ ವರದಿಗಳು ತಿಳಿಸಿವೆ. ಅಲ್ಲದೆ "ಭಾರತ ನೀಡಿದ ಪುರಾವೆ, ಸಾಕಷ್ಟು ಸಾಕ್ಷ್ಯಗಳನ್ನು ನೀಡುತ್ತಿಲ್ಲ. ಅದು ಕೇವಲ ಮಾಹಿತಿಯಾಗಿರುವ ಕಾರಣ ಸಾಕಾಗುತ್ತಿಲ್ಲ, ಅಲ್ಲದೆ ಉಗ್ರವಾದದ ಕುರಿತು ಜಂಟಿ ತನಿಖೆ ನಡೆಸುವ ತನ್ನ ಆಹ್ವಾನವನ್ನು ಮರು ಪರಿಶೀಲಿಸಲಿದೆ" ಎಂದು ವರದಿಯಲ್ಲಿ ಹೇಳಲಾಗಿದೆ.
ವಿದೇಶಿ ಕಚೇರಿ, ಆಂತರಿಕ ಸಚಿವಾಲಯ ಹಾಗೂ ಇತರ ಭದ್ರತಾ ಸಂಸ್ಥೆಗಳೊಂದಿಗಿನ ಸುದೀರ್ಘ ಚರ್ಚೆಯ ಬಳಿಕ ಪಾಕಿಸ್ತಾನದ ಉತ್ತರವನ್ನು ಸಿದ್ಧಪಡಿಸಲಾಗಿದ್ದು, ಇನ್ನೇನು ಮುಕ್ತಾಯದ ಹಂತದಲ್ಲಿದೆ ಎಂದು ಅನಾಮಧೇಯರಾಗಿ ಉಳಿಯಲು ಬಯಸಿರುವ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆಂದು ದಿ ನೇಶನ್ ಡೇಲಿ ವರದಿ ಮಾಡಿದೆ.
ಪಾಕಿಸ್ತಾನ ಅಧ್ಯಕ್ಷ ಮತ್ತು ಪ್ರಧಾನಿಯವರು ಅಂಗೀಕರಿಸಿದ ಬಳಿಕ ಈ ಉತ್ತರವನ್ನು ಭಾರತಕ್ಕೆ ಒಂದು ವಾರದೊಳಗಾಗಿ ಸಲ್ಲಿಸಲಾಗುವುದು ಎಂದು ವರದಿ ತಿಳಿಸಿದೆ. |