ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯ 'ಭಾಷಾ ಪ್ರೇಮ' ಎಷ್ಟರ ಮಟ್ಟಿಗೆ ಇದೆಯೆಂದರೆ, ತಮ್ಮ ಕುಟುಂಬಿಕರ ಹೆಸರಿನ ಬಗ್ಗೆ ಮೌನವಾಗಿದ್ದರೂ, ಸಂಸ್ಕೃತದ ಹೆಸರನ್ನು ಬದಲಾಯಿಸಿಕೊಳ್ಳಿ ಎಂದು ಬೇರೆಯವರಿಗೆ ಒತ್ತಾಯಿಸುತ್ತಿರುವ ಮನಸ್ಥಿತಿ ಮತ್ತೊಮ್ಮೆ ಸಾಬೀತಾಗಿದೆ.
ತಮಿಳು ವಿದ್ವಾಂಸ ಕೆ.ಎ.ಪಿ.ವಿಶ್ವನಾಥಂ ಅವರ ಮೊಮ್ಮಗಳು ಜಯಶ್ರೀ, ತಮ್ಮ ಸಂಸ್ಕೃತದ ಹೆಸರು ಬದಲಿಸಿ ಒಳ್ಳೆಯ ತಮಿಳು ಹೆಸರು ಇರಿಸಿಕೊಳ್ಳಬೇಕೆಂದು ಕರುಣಾನಿಧಿ ಇತ್ತೀಚಿನ ದಿನಗಳಲ್ಲಿ ಮೂರನೇ ಬಾರಿ ಸಾರ್ವಜನಿಕ ಸಮಾರಂಭದಲ್ಲಿ ಹೇಳುತ್ತಿದ್ದಾರೆ. ತನ್ನ 'ಸಲಹೆ'ಯ ಹೊರತಾಗಿಯೂ ಜಯಶ್ರೀ ತಮ್ಮ ಹೆಸರು ಬದಲಾಯಿಸಿಕೊಳ್ಳದಿರುವುದನ್ನು ಅವರು ಟೀಕಿಸಿದ್ದಾರೆ.
ಗುರುವಾರ ತಮಿಳುನಾಡು ಸರಕಾರದ ವಾರ್ಷಿಕ ಪ್ರಶಸ್ತಿ ವಿತರಣಾ ಸಮಾರಂದಲ್ಲಿ ಗುರುವಾರ ಮಾತನಾಡುತ್ತಿದ್ದ ಅವರು, "ನಾನು ಈ ವಿಷಯದಲ್ಲಿ ಮೂರನೇ ಬಾರಿ ಮಾತನಾಡುತ್ತಿದ್ದೇನೆ ಮತ್ತು ಜಯಶ್ರೀ ತಮ್ಮ ಸಂಸ್ಕೃತ ಹೆಸರನ್ನು ಒಂದು ಒಳ್ಳೆಯ ಸಾರ್ವಜನಿಕ ಸಮಾರಂಭದಲ್ಲಿ ಒಳ್ಳೆಯ ತಮಿಳು ಹೆಸರಿಗೆ ಬದಲಾಯಿಸಿಕೊಳ್ಳುತ್ತಾರೆ ಎಂಬುದನ್ನು ನಿರೀಕ್ಷಿಸುತ್ತೇನೆ" ಎಂದು ಹೇಳಿದ್ದಾರೆ.
ತಮ್ಮ ತಮಿಳುಪ್ರೇಮಕ್ಕೆ ಮತ್ತಷ್ಟು ಪುಷ್ಟಿ ನೀಡಲು ಅವರು, ಡಿಎಂಕೆ ನಾಯಕ ತಂಗಪಾಂಡಿಯನ್ ಅವರ ಪುತ್ರಿ, ಕವಯಿತ್ರಿ ಸುಮತಿ ಹೆಸರನ್ನು ತಮಿಳಾಚಿ ತಂಗಪಾಂಡಿಯನ್ ಎಂದು ತಾನೇ ಬದಲಿಸಿದ್ದೆ ಎಂದು ನೆನಪಿಸಿದ್ದಾರೆ.
ಆದರೆ, ಕರುಣಾನಿಧಿ ಬೇರೆಯವರಿಗೆ ಮಾತ್ರ ಇದನ್ನೇಕೆ ಹೇಳುತ್ತಿದ್ದಾರೆ ಎಂಬುದು ಅಚ್ಚರಿ ಮೂಡಿಸುವ ವಿಷಯ. ಅವರ ಹೆಸರು ಕರುಣಾನಿಧಿ, ಕುಟುಂಬಿಕರ ಹೆಸರು ದಯಾಳು, ದುರ್ಹಾ, ಉದಯನಿಧಿ, ಕೃತ್ತಿಕಾ ಮುಂತಾದ ಸಂಸ್ಕೃತ ಹೆಸರುಗಳಿವೆ. ಮಗ ಮತ್ತು ಸಚಿವರೂ ಆಗಿರುವ ಸ್ಟಾಲಿನ್ ಹೆಸರು ಕೂಡ ತಮಿಳು ಹೆಸರಲ್ಲ.
ನೀವೇನಂತೀರಿ? |