ಕರ್ನಾಟಕದ ಬಿಜೆಪಿ ಸರ್ಕಾರದ ಮೇಲೆ ಹರಿಹಾಯ್ದಿರುವ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ, ನೆರೆ ರಾಜ್ಯದಲ್ಲಿರುವ ಮರಾಠಿಗರ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 'ಘೋರ ದೌರ್ಜನ್ಯ' ಎಸಗುತ್ತಿದ್ದಾರೆ ಎಂದು ದೂರಿದ್ದಾರೆ.
"ಮುಖ್ಯಮಂತ್ರಿ ಯಡಿಯೂರಪ್ಪ ಮುಂಬೈಗೆ ಬಂದಿದ್ದಾಗ ಅವರಿಗೆ ಕೆಂಪುಹಾಸಿನ ಸ್ವಾಗತ ನೀಡಲಾಗಿತ್ತು. ಇದೇ ಮುಖ್ಯಮಂತ್ರಿ ಇದೀಗ ಕರ್ನಾಟಕದಲ್ಲಿರುವ ಮರಾಠಿಗರ ವಿರುದ್ಧ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಠಾಕ್ರೆ ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಕಿಡಿಕಾರಿದ್ದಾರೆ.
"ಮರಾಠಿಗರ ಮೇಲೆ ದೊಣ್ಣೆ ಹಾಗು ಬಂಧೂಕುಗಳಿಂದ ಹಲ್ಲೆ ಮಾಡಲಾಗಿದೆ. ಅಲ್ಲದೆ ದನಕ್ಕೆ ಬಡಿಯುವಂತೆ ಬಡಿದಿದ್ದಾರೆ. ಮರಾಠಿಗರ ತಲೆ ಒಡೆಯುವ ಮೂಲಕ ಕರ್ನಾಟಕ ಸರ್ಕಾರ ರಟ್ಟೆಬಲ ತೋರಿಸಲು ಇಚ್ಚಿಸಿದರೆ, ಮಹಾರಾಷ್ಟ್ರವು ಶಿವಾಜಿ ಮಹಾರಾಜನ ನಾಡೆಂಬುದನ್ನು ನೆನಪಿನಲ್ಲಿರಿಸಿಕೊಳ್ಳಲಿ ಎಂದು ಎಚ್ಚರಿಸಿದ್ದಾರೆ.
"ದಕ್ಷಿಣದಲ್ಲಿ ತಾವರೆ ಅರಳುವಿಕೆಯ ಹಿಂದೆ ಯಡಿಯೂರಪ್ಪ ಇದ್ದಾರೆ ಎಂಬುದು ಸಂತೋಷದ ವಿಷಯ. ಆದರೆ ಅವರು ಮರಾಠಿ ನರಮೇಧ ಮಾಡುವ ಸಂಕಲ್ಪವನ್ನು ಯಾಕೆ ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.
"ಲಕ್ಷಾಂತರ ಮಂದಿ ಕನ್ನಡಿಗರ ಪ್ರಸ್ತುತಿಯಿಂದ ತನಗೆ ಮೈಸೂರಿನಲ್ಲಿ ಇರುವ ಅನುಭವವಾಗುತ್ತಿದೆ ಎಂಬುದಾಗಿ ಯಡಿಯೂರಪ್ಪ ಮುಂಬೈಗೆ ಆಗಮಿಸಿದ್ದ ವೇಳೆ ಹೇಳಿರುವುದನ್ನು ನೆನಪಿಸಿದ ಅವರು, ಇದೇ ತರ್ಕವನ್ನೇ ಯಾಕೆ ನಿಮ್ಮ ರಾಜ್ಯಕ್ಕೆ ಅನ್ವಯಿಸಿ ಮರಾಠಿಗರ ವಿರುದ್ಧದ ದೌರ್ಜನ್ಯವನ್ನು ನಿಲ್ಲಿಸುವುದಿಲ್ಲ?" ಎಂದು ಅವರು ಪ್ರಶ್ನಿಸಿದರು.
ಮಸೂದ್ ಅಜರ್‌ನಂತಹ ಉಗ್ರನನ್ನು ಸಚಿವರೊಬ್ಬರು ಕಾಂದಾರ್‌ಗೆ ಕರೆದೊಯ್ದು ಬಿಟ್ಟು ಬರುತ್ತಾರೆ. ಸಂಸತ್ ಮೇಲೆ ದಾಳಿ ನಡೆಸಿರುವ ಅಫ್ಜಲ್ ಗುರುವಿನ ಮರಣದಂಡನೆ ನಿಲ್ಲಿಸಲು ಪ್ರಯತ್ನಗಳು ನಡೆಯುತ್ತಿದೆ. ಈ ದೇಶದಲ್ಲಿ ಉಗ್ರರಿಗೆ ನ್ಯಾಯ ಸಿಗುತ್ತದೆ. ಆದರೆ, ಕಳೆದ 60 ವರ್ಷಗಳಿಂದ ಪ್ರಜಾಪ್ರಭುತ್ವ ರೀತಿಯಲ್ಲಿ ಹೋರಾಟ ನಡೆಸುತ್ತಿರುವ ಮರಾಠಿ ಜನರಿಗೆ ದೊಣ್ಣೆಗಳು ಮತ್ತು ಗುಂಡಿನಿಂದ ಹಲ್ಲೆ ಮಾಡಲಾಗುತ್ತಿದೆ" ಎಂದು ಠಾಕ್ರೆ ವ್ಯಂಗ್ಯವಾಡಿದ್ದಾರೆ. |