ಸತ್ಯಂ ಹಗರಣವು ಸಂಸ್ಥೆಯ ಉದ್ಯೋಗಿಗಳ ಕನಸನ್ನು ನೀರು ಮಾಡಿರುವಂತೆ, ಐಟಿ ಸಂಸ್ಥೆಯಲ್ಲಿ ಉದ್ಯೋಗಾಕಾಂಕ್ಷಿಗಳ ಕನಸಿಗೂ ತಣ್ಣೀರೆರಚಿದೆ. ಪಂಜಾಬ್ ಮತ್ತು ಹರ್ಯಾಣದ ಉದ್ಯೋಗಾಕಾಂಕ್ಷಿಗಳು ಹೈದರಾಬಾದ್ ಮೂಲದ ಸಂಸ್ಥೆಯಿಂದ ದೂರಸರಿಯುತ್ತಿದ್ದಾರೆ. ಕೆಲವರಂತೂ ಐಟಿ ಸಂಸ್ಥೆಗಳ ಸಹವಾಸವೇ ಬೇಡ ಎನ್ನುತ್ತಿದ್ದಾರೆ.
ಸತ್ಯಂ ಕಂಪ್ಯೂಟರ್ಸ್‌ನಲ್ಲಿ ಉದ್ಯೋಗಕ್ಕಾಗಿ ಆಯ್ಕೆಯಾಗಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಇದೀಗ ತಮ್ಮ ಮನಸ್ಸು ಬದಲಿಸಿದ್ದಾರೆ. ಇದಲ್ಲದೆ, ಐಟಿ ಸಂಸ್ಥೆಗಳಲ್ಲಿ ಉದ್ಯೋಗ ಹೊಂದಲು ಕಾತರರಾಗಿದ್ದ ವಿದ್ಯಾರ್ಥಿಗಳು ಇದೀಗ ಇತರ ವಲಯಗಳತ್ತ ತಮ್ಮ ಮನಸ್ಸು ನೆಟ್ಟಿದ್ದಾರೆ.
"ತನಗೆ ಸತ್ಯಂನಲ್ಲಿ ಕಳೆದ ವರ್ಷ ಟ್ರೈನೀ ಉದ್ಯೋಗದ ಆಹ್ವಾನ ನೀಡಲಾಗಿದೆ. ಆದರೆ ಸತ್ಯಂ ಗೋಲ್ಮಾಲ್ ಬೆಳಕಿಗೆ ಬಂದ ಬಳಿಕ ತನ್ನ ಮನಸ್ಸು ಬದಲಿಸಿದ್ದೇನೆ. ಇತರ ಯಾವುದೇ ಸಂಸ್ಥೆಯಲ್ಲಿ ಸೂಕ್ತ ಉದ್ಯೋಗ ನೋಡಿಕೊಳ್ಳುತ್ತೇನೆ" ಎಂದು ದಿವ್ಯಾದೀಪ್ ಗೋಯಲ್ ಎಂಬ ಎಂಜಿನಿಯರಿಂಗ್ ವಿದ್ಯಾರ್ಥಿ ಹೇಳುತ್ತಾರೆ. ಇವರಿಗೆ ವಾರ್ಷಿಕ 3.25 ಲಕ್ಷ ರೂಪಾಯಿ ವೇತನ ನಿಗದಿಯಾಗಿತ್ತು.
ಇದೇ ಧ್ವನಿಯಲ್ಲಿ ಮಾತನಾಡುತ್ತಿರುವ ಇನ್ನೋರ್ವ ವಿದ್ಯಾರ್ಥಿ ಸುಮಂತ್, ಸತ್ಯಂ ವಂಚನೆ ಹಗರಣ ಅತೀವ ಹಾನಿಕರ. ತನಗೀಗ ಐಟಿ ಸಂಸ್ಥೆಯಲ್ಲಿ ಉದ್ಯೋಗ ಪಡೆಯುವ ಆಸೆಯೇ ಇಲ್ಲ. ನಾವು ಯಾವುದಾದರೂ ಇತರ ವಲಯದ ಸಂಸ್ಥೆಗಳಲ್ಲಿ ಉದ್ಯೋಗ ಅರಸಿಕೊಳ್ಳುತ್ತೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. |