ವಿಶಾಖಪಟ್ಟಣಂ: ಎಂ.ವಿ.ಮಾನ್ಯಾರ ಎಂಬ ಹಡಗಿನಲ್ಲಿದ್ದ ಮೂವರು ಭಾರತೀಯರನ್ನು ಸೊಮಾಲಿಯಾ ಕಡಲ್ಗಳ್ಳರು ಒತ್ತೆ ಇರಿಸಿಕೊಂಡಿರುವುದಾಗಿ ಶುಕ್ರವಾರ ದೃಢಪಡಿಸಿರುವ ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಸುರೇಶ್ ಮೆಹ್ತಾ ಅವರ ಸುರಕ್ಷತೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಕಿನ್ಯಾ ಕರಾವಳಿಯಲ್ಲಿ ಸೊಮಾಲಿಯಾ ಕಡಲ್ಗಳ್ಳರು ಅಪಹರಿಸಿರುವ ಭಾರತೀಯರ ಸುರಕ್ಷೆಗಾಗಿ ನಾವು ಸಾಧ್ಯವಿರುವ ಎಲ್ಲವನ್ನೂ ಮಾಡಲಿದ್ದೇವೆ ಎಂದು ತಿಳಿಸಿದರು. ಹಡಗಿನಲ್ಲಿದ್ದ ಕಿನ್ಯಾ ಸಿಬ್ಬಂದಿಗಳನ್ನು ಬಿಡುಗಡೆ ಮಾಡಿರುವ ಅಪಹರಣಕಾರರು ಭಾರತೀಯ ನಾವಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ.
ಕಿನ್ಯಾ ಕರಾವಳಿ ಸಮೀಪದಿಂದ ಜನವರಿ 9ರಂದು ಎಂ.ವಿ.ಆಲ್ಫಾ ಮಾನ್ಯಾರ ಎಂಬ ಹಡಗನ್ನು ಅಪಹರಿಸಲಾಗಿದ್ದು, ಭಾರತೀಯ ನಾವಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ ಎಂದು ಒತ್ತೆಯಾಳಾಗಿ ಸಿಲುಕಿಕೊಂಡಿರುವ ವ್ಯಕ್ತಿಯ ಸಂಬಂಧಿಯೊಬ್ಬರು ತಿಳಿಸಿದ್ದಾರೆ. ಅಪಹರಣಕಾರರು ಹಡಗಿನಲ್ಲಿದ್ದ ಎಂಟು ಕಿನ್ಯಾ ನಾವಿಕರನ್ನು ಬಿಡುಗಡೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಹಡಗಿನಲ್ಲಿದ್ದ 11 ಸಿಬ್ಬಂದಿಗಳಲ್ಲಿ ಮೂವರು ಭಾರತೀಯರು ಹಾಗೂ ಮಿಕ್ಕವರೆಲ್ಲ ಕಿನ್ಯಾದವರು. ಭಾರತೀಯರನ್ನು ಮಾತ್ರ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ ಎಂದು ನಾವಿಕ ಪಾಲಸಾಮಿ ಸರವಣನ್ ಎಂಬಾತನ ಸಹೋದರ ಜಾರ್ಜ್ ಎಂಬವರು ಹೇಳಿದ್ದಾರೆ. |