ಶೇರುದಾರರಿಗೆ ಸಾವಿರಾರು ಕೋಟಿ ಪಂಗನಾಮ ಹಾಕಿರುವ ಸತ್ಯಂ ಸಂಸ್ಥಾಪಕ ರಾಮಲಿಂಗಾ ರಾಜು ತನಿಖೆ ನಡೆಸಲು ಸೆಬಿಗೆ ಹೈದರಾಬಾದ್ ನ್ಯಾಯಾಲಯ ಶುಕ್ರವಾರ ಅವಕಾಶ ನಿರಾಕರಿಸಿದೆ.
ನ್ಯಾಯಾಂಗ ಬಂಧನದಲ್ಲಿರುವ ರಾಮಲಿಂಗಾ ರಾಜು, ಅವರ ಸಹೋದರ ರಾಮರಾಜು, ಮುಖ್ಯ ಹಣಕಾಸು ಅಧಿಕಾರಿ ವಡ್ಲಮಣಿ ಶ್ರೀನಿವಾಸ್ ಅವರನ್ನು ತನಿಖೆ ನಡೆಸಲು ಅವಕಾಶ ನೀಡಬೇಕು ಎಂದು ಸೆಬಿ ನ್ಯಾಯಾಲಯವನ್ನು ಕೋರಿತ್ತು.
ಈ ಹಿಂದೆ ರಾಜು ವಕೀಲರಾದ ಭರತ್ ಕುಮಾರ್ ಅವರು ಸೆಬಿ ಸಲ್ಲಿಸಿರುವ ಅರ್ಜಿಗೆ ಪ್ರತ್ಯರ್ಜಿ ಸಲ್ಲಿಸಲು ಒಂದು ದಿನದ ಕಾಲಾವಕಾಶ ಕೋರಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿತ್ತು. ಇದೀಗ ಪ್ರಕರಣವನ್ನು ಮತ್ತೆ ಜನವರಿ 19ಕ್ಕೆ ಮುಂದೂಡಲಾಗಿದೆ.
ರಾಜು ಅವರಿಗೀಗ ಯಾವುದೇ ದಾಖಲೆಗಳು ಅಥವಾ ಕಡತಗಳು ಲಭ್ಯವಾಗುತ್ತಿಲ್ಲ ಹಾಗೂ ತನಿಖೆಯ ಮುಂಚಿತವಾಗಿ ಅವರಿಗೆ ಕಾನೂನು ಸಲಹೆಯ ಅಗತ್ಯವಿದೆ, ಇದು ನ್ಯಾಯಾಂಗ ಬಂಧನದಲ್ಲಿ ಸಾಧ್ಯವಿಲ್ಲ. ಹಾಗಿರುವಾಗ ರಾಜುಗೆ ಜಾಮೀನು ಲಭಿಸಿದ ಬಳಿಕ ಸೆಬಿ ತನಿಖೆ ಮುಂದುವರಿಸ ಬಹುದು ಎಂದು ರಾಜು ವಕೀಲರು ವಾದಿಸಿದ್ದಾರೆ.
ರಾಜು ನ್ಯಾಯಾಂಗ ಬಂಧನದಲ್ಲಿರುವ ಕಾರಣ ಅವರ ತನಿಖೆಗೆ ವಿಳಂಬವಾಗುತ್ತಿದೆ ಎಂದು ಸೆಬಿ ವಕೀಲರು ಬುಧವಾರ ವಾದಿಸಿದ್ದರು.
ಸೆಬಿ ವಿಚಾರಣೆಯನ್ನು ಮುಂದೂಡಬೇಕೆಂಬ ಉದ್ದೇಶದಿಂದಲೇ ಸರ್ಕಾರವು ತರಾತುರಿಯಲ್ಲಿ ರಾಜು ಅವರನ್ನು ಬಂಧಿಸಿದೆ ಎಂಬ ಆರೋಪಗಳೂ ಕೇಳಿಬರುತ್ತಿದೆ. |