ಮುಂಬೈ ನರಮೇಧದ ರೂವಾರಿಗಳನ್ನು ಭಾರತಕ್ಕೆ ಹಸ್ತಾಂತರಿಸುವಲ್ಲಿ ಯಾವುದಾದರೂ ತೊಡಕಿದ್ದರೆ ಅವರ ವಿಚಾರಣೆಯನ್ನು ಪಾಕಿಸ್ತಾನದಲ್ಲಿ ನ್ಯಾಯೋಚಿತವಾಗಿ ನಡೆಸಲಿ ಎಂಬುದಾಗಿ ಗುರುವಾರ ಹೇಳಿಕೆ ನೀಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ, ಪಾತಕಿಗಳನ್ನು ಭಾರತಕ್ಕೆ ಒಪ್ಪಿಸಬೇಕು ಎಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದಾಗಿ ಶುಕ್ರವಾರ ಹೇಳಿದ್ದಾರೆ.
"ನರಮೇಧದ ಸೃಷ್ಟಿಕರ್ತರು ಭಾರತದ ಕಾನೂನನ್ನು ಎದುರಿಸಲೇಬೇಕು" ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪ್ರಣಬ್ ಹೇಳಿದ್ದಾರೆ. ಮುಂಬೈ ದಾಳಿಕೋರರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂಬ ಭಾರತದ ಒತ್ತಾಯದಲ್ಲಿ ಬದಲಾವಣೆ ಇದೆಯೇ ಎಂದು ಕೇಳಲಾದ ಪ್ರಶ್ನೆಗೆ ಅವರು ಈ ಮೇಲಿನಂತೆ ಉತ್ತರಿಸಿದ್ದಾರೆ.
"ಭಯೋತ್ಪಾದನೆಯ ಕುರಿತು ಸಾರ್ಕ್ ಸಮ್ಮೇಳನದಲ್ಲಿ ಇದೇ ಮನೋಭಾವ ವ್ಯಕ್ತವಾಗಿದೆ. ಮತ್ತು ಇಂತಹುದೇ ಕರಾರುಗಳು ಅಂತಾರಾಷ್ಟ್ರೀಯ ದಸ್ತಾವೇಜುಗಳಲ್ಲೂ ಇವೆ" ಎಂದು ಅವರು ಹೇಳಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಣಬ್, ಪಾಕಿಸ್ತಾನಕ್ಕೆ ದುರುಳರನ್ನು ಹಸ್ತಾಂತರಿಸಲು ಅಡ್ಡಿಯಾದರೆ ಅದರದ್ದೇ ನೆಲದಲ್ಲಿ ಸೂಕ್ತ ತನಿಖೆ ನಡೆಸಬೇಕು ಎಂಬರ್ಥದ ಹೇಳಿಕೆ ನೀಡಿದ್ದರು.
"ಭಾರತದ ದೇಶಭ್ರಷ್ಟರನ್ನು ನಮಗೆ ಹಸ್ತಾಂತರಿಸಬೇಕು. ಸಾಧ್ಯವಾಗದಿದ್ದಲ್ಲಿ, ಇಂತಹ ರಾಷ್ಟ್ರಭ್ರಷ್ಟರ ಕುರಿತು ನ್ಯಾಯೋಚಿತ ತನಿಖೆ ನಡೆಸಬೇಕು ಎಂಬುದಾಗಿ ಪ್ರಣಬ್ ಆಜ್ ತಕ್‌ಗೆ ಗುರುವಾರ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಅದು ಕಣ್ಕಟ್ಟಿನ ವಿಚಾರಣೆಯಾಗಬಾರದು. ಅದು ಪಾರದರ್ಶಕ ಮತ್ತು ಪ್ರತ್ಯಕ್ಷದರ್ಶಿ ತನಿಖೆಯಾಗಬೇಕು" ಎಂದೂ ಅವರು ಹೇಳಿದ್ದರು.
"ಭಾರತ ಮತ್ತು ಪಾಕಿಸ್ತಾನ ಗಡಿಪಾರಿನ ಒಪ್ಪಂದಕ್ಕೆ ಸಹಿಹಾಕಿಲ್ಲ. ಆದರೆ ಇದನ್ನು ಹೇತುವಾಗಿ ಬಳಸಿಕೊಳ್ಳುವಂತಿಲ್ಲ. ಅಪರಾಧಿಗಳನ್ನು ಹಸ್ತಾಂತರಿಸಲು ಸಾಕಷ್ಟು ಅಂತಾರಾಷ್ಟ್ರೀಯ ಕರಾರುಗಳು ಇವೆ" ಎಂದು ಸಚಿವರು ನುಡಿದರು.
ಮುಂಬೈ ದಾಳಿ ರೂವಾರಿಗಳು ಸೇರಿದಂತೆ ವಿವಿಧ ಭಯೋತ್ಪಾದನಾ ಪ್ರಕರಣಗಳಲ್ಲಿ ಭಾಗಿಯಾಗಿರುವ ಸುಮಾರು 40ಕ್ಕೂ ಅಧಿಕ ದೇಶಭ್ರಷ್ಟರನ್ನು ಒಪ್ಪಿಸುವಂತೆ ಭಾರತ ಪಾಕಿಸ್ತಾನವನ್ನು ವಿನಂತಿಸಿದೆ.
ಪಾಕ್ ಕ್ರಮ ಕೈಗೊಂಡಿದೆ ಉಗ್ರರ ನಿಗ್ರಹಕ್ಕೆ ಪಾಕಿಸ್ತಾನ ಕ್ರಮಕೈಗೊಳ್ಳುತ್ತಿದೆ ಎಂದಿರುವ ಪಾಕಿಸ್ತಾನ ನಿಷೇಧಿತ ಸಂಘಟನೆಗಳ 71 ಮಂದಿಯನ್ನು ಬಂಧಿಸಲಾಗಿದೆ ಮತ್ತು ಇತರ 124 ಮಂದಿಯ ಚಲನವಲನಗಳ ಬಗ್ಗೆ ನಿಗಾ ವಹಿಸಲಾಗಿದೆ. ಜಮಾತ್ ಉದ್ ದಾವಾದ ಐದು ತರಬೇತಿ ಶಿಬಿರಗಳನ್ನು ಮುಚ್ಚಲಾಗಿದೆ ಎಂದು ಹೇಳಿದೆ.
ಇಷ್ಟಾದರೂ, ಮುಂಬೈ ದಾಳಿಗೂ ಪಾಕಿಸ್ತಾನ ರಾಷ್ಟ್ರೀಯರಿಗೂ ಸಂಪರ್ಕ ಕುರಿತು ಭಾರತ ನೀಡಿರುವ ಪುರಾವೆಯು ಸಾಕಷ್ಟು ಆಧಾರಗಳನ್ನು ನೀಡುತ್ತಿಲ್ಲ, ಇದು ಬರಿಯ ಮಾಹಿತಿ ಮಾತ್ರ ಎಂದು ಪಾಕಿಸ್ತಾನ ವಾದಿಸುತ್ತಿದೆ. |