ಕೇಬಲ್ ಟಿವಿ ಜಾಲ ಕಾಯ್ದೆಗೆ ಬದಲಾವಣೆಯನ್ನು ಮಾಡಿದ ಬಳಿಕ ಪತ್ರಿಕಾಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುವುದಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಭರವಸೆ ನೀಡಿದ್ದಾರೆ.ಬಾನುಲಿ ಮತ್ತು ಟಿವಿ ಸಂಪಾದಕರು ಶುಕ್ರವಾರ ಪ್ರಧಾನಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಮುಂಬೈ ದಾಳಿಯಂತಹ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಮಾಧ್ಯಮಗಳ ಪ್ರಕಟಣಾ ವಿಚಾರಗಳ ಸೆನ್ಸಾರ್ ಕುರಿತು ಕಳವಳ ವ್ಯಕ್ತಪಡಿಸಿರುವ ವೇಳೆಗೆ ಪ್ರಧಾನಿ ಈ ಭರವಸೆ ನೀಡಿದ್ದಾರೆ.ಟಿವಿ ಸಂಪಾದಕರ ನಿಯೋಗದ ನೇತೃತ್ವ ವಹಿಸಿದ್ದ ರಾಜ್‌ದೀಪ್ ಸರ್ದೇಸಾಯ್ ಅವರು ವರದಿಗಾರರೊಂದಿಗೆ ಮಾತನಾಡುತ್ತಾ, "ಟಿವಿಗಳಲ್ಲಿ ಬಿತ್ತರವಾಗುವ ಸುದ್ದಿಗಳೊಂದಿಗೆ ಯಾವುದೆ ರೀತಿಯಲ್ಲಿ ರಾಜಿಮಾಡಿಕೊಳ್ಳದಿರುವಂತ ತಡೆಯಲು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲವನ್ನೂ ಮಾಡುವುದಾಗಿ ಪ್ರಧಾನಿ ಸಿಂಗ್ ಭರವಸೆ ನೀಡಿದ್ದಾರೆ" ಎಂದು ತಿಳಿಸಿದರು.ತಾನು ಪತ್ರಿಕಾ ಸ್ವಾತಂತ್ರ್ಯದಲ್ಲಿ ನಂಬುಗೆ ಇರಿಸಿರುವ ಕಾರಣ ಯಾರಿಗೇ ಆಗಲಿ ಮಾಧ್ಯಮದ ಮೇಲೆ ನಿಯಂತ್ರಣ ಹೇರಲು ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ವೈಯಕ್ತಿಕ ಭರವಸೆ ನೀಡಿದ್ದಾರೆ ಎಂದು ಸರ್ದೇಸಾಯ್ ಹೇಳಿದ್ದಾರೆ.ಮುಂಬೈ ದಾಳಿಯ ವೇಳೆ ಟಿವಿ ಮಾಧ್ಯಮಗಳು ಸುದ್ದಿ ಬಿತ್ತರ ಮಾಡಿರುವ ರೀತಿಯ ಹಿನ್ನೆಲೆಯಲ್ಲಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಿರುವ ಸರ್ಕಾರಕ್ಕೆ ಪ್ರಧಾನಿಯವರ ಈ ಭರವಸೆಯಿಂದಾಗಿ ಹಿನ್ನಡೆ ಉಂಟಾಗಿದೆ.ಇದೇ ವೇಳೆ, ಸುದ್ದಿ ವಾಹಿನಿಗಳು ತಮ್ಮ ಮೇಲೆ ಸ್ವಯಂ ನಿಯಂತ್ರಣ ಹೇರಿಕೊಳ್ಳುವುದಾಗಿ ಭರವಸೆ ನೀಡಿರುವ ಸಂಪಾದಕರು, ಪತ್ರಿಕಾ ಸೆನ್ಸಾರ್ ಅಥವಾ ಯಾವುದೇ ಮೇಲ್ವಿಚಾರಣೆಯ ಅಗತ್ಯ ಇಲ್ಲ ಎಂಬುದನ್ನು ಪ್ರಧಾನಿಯವರಿಗೆ ಮನವರಿಕೆ ಮಾಡಿದ್ದಾರೆ.ಸಂಪಾದಕೀಯ ನೀತಿಯಲ್ಲಿ ಯಾವುದೇ ಹಸ್ತಕ್ಷೇಪ ಇರುವುದಿಲ್ಲ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಎಲ್ಲಾ ರೀತಿಯಲ್ಲೂ ಸಂರಕ್ಷಿಸಲಾಗುವುದು ಎಂಬುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆನ್ನಲಾಗಿದೆ. |