ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಹಮ್ಮಿಕೊಂಡಿರುವ ಅಭಿವೃದ್ಧಿ ಕಾರ್ಯಗಳು ಅನುಕರಣೀಯ ಎಂಬುದಾಗಿ ಸಿಪಿಐ-ಎಂ ಸಂಸದ ಎ.ಪಿ.ಅಬ್ದುಲ್ಲಾ ಕುಟ್ಟಿ ಹೇಳುವ ಮೂಲಕ ತನ್ನ ಪಕ್ಷದ ಕೆಂಗಣ್ಣಿಗೀಡಾಗಿದ್ದಾರೆ. ಇವರು ಮೋದಿಯವರ ಅಭಿವೃದ್ದಿ ಕಾರ್ಯವನ್ನು ಹೊಗಳಿದ್ದಾರಾದರೂ, ಅವರ ಕೋಮುವಾದಿ ಅಜೆಂಡಾವನ್ನು ಸಾರಸಗಟಾಗಿ ತಳ್ಳಿಹಾಕಿದ್ದಾರೆ.
ಈ ಅಚ್ಚರಿಯ ಹೇಳಿಕೆಗೆ ಪಕ್ಷವು ಕೇಳಿರುವ ವಿವರಣೆಗೆ ಪ್ರತಿಯಾಗಿ ಜಿಲ್ಲಾ ಘಟಕಕ್ಕೆ ಉತ್ತರಿಸಿದ ತಕ್ಷಣದಲ್ಲಿ ನೀಡಿರುವ ಹೇಳಿಕೆಯಲ್ಲಿ, ಕಣ್ಣೂರು ಸಂಸದ ಅಬ್ದುಲ್ಲಾ ಕುಟ್ಟಿ ಅವರು ಗುಜರಾತಿನಲ್ಲಿ ನರೇಂದ್ರ ಮೋದಿ ಅವರು ಸೃಷ್ಟಿಸಿರುವ ಹೂಡಿಕಾ ಸ್ನೇಹಿ ಅಭಿವೃದ್ಧಿ ವಾತಾವರಣದ ಕುರಿತು ತನ್ನ ಅಭಿಪ್ರಾಯವನ್ನು ಪುನರುಚ್ಚರಿಸಿದ್ದಾರೆ. ಹರತಾಳಗಳಂತಹ ಸಮಸ್ಯೆಗಳಿಂದ ಬಳಲುತ್ತಿರುವ ಕೇರಳದಂತಹ ರಾಜ್ಯದಲ್ಲಿ ಉತ್ತಮ ಉದ್ದೇಶದಿಂದ ಚರ್ಚೆಗೆ ನಾಂದಿ ಹಾಡಿರುವುದಾಗಿ ಹೇಳಿದ್ದಾರೆ.
ಸಿಪಿಐ-ಎಂ ಪಕ್ಷದ ಅಧಿಕೃತ ಉತ್ತರ ಇನ್ನಷ್ಟೆ ಹೊರಬೀಳಬೇಕಿದ್ದರೂ, ಎಲ್‌ಡಿಎಫ್ ಸಂಯೋಜಕ ಹಾಗೂ ಪಕ್ಷದ ರಾಜ್ಯ ಸಚೇತಕ ಸದಸ್ಯ ವೈಕಂ ವಿಶ್ವನ್ ಅವರು, ಅಬ್ದುಲ್ಲಾಕುಟ್ಟಿ ಅವರು ಹೇಳಿರುವಂತೆ ಮೋದಿ ಅವರ ಅಭಿವೃದ್ಧಿ ಮಾದರಿ ಪ್ರಶಂಸನೀಯ ಎಂಬುದನ್ನು ತಾನು ಒಪ್ಪುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
"ಮೋದಿಯವರ ಕೋಮುವಾದಿ ಕಾರ್ಯಕ್ರಮಗಳನ್ನು ತಾನೆಂದಿಗೂ ಕ್ಷಮಿಸುವುದಿಲ್ಲ. ಆದರೆ, ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿದಂತೆ ನಾನವರಿಗೆ ಫುಲ್ ಮಾರ್ಕ್ ಕೊಡುತ್ತೇನೆ. ಇದರಲ್ಲಿ ತಪ್ಪೇನು ಇಲ್ಲ ಎಂಬುದಾಗಿ ತನಗನಿಸುತ್ತದೆ" ಎಂದು ಹೇಳಿದ್ದಾರೆ. ಅಲ್ಲದೆ ಪಕ್ಷದ ಹಿರಿಯ ಪ್ರೇರಕರಾಗಿದ್ದ ದಿವಂಗದ ನಂಬೂದರಿಪಾದ್ ಅವರೇ ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯವನ್ನು ಟೀಕಿಸಿದ್ದರು ಎಂಬುದನ್ನು ನೆನೆಪಿಸಿಕೊಂಡರು. |