ಕರ್ನಾಟಕದ ಬಿಜೆಪಿ ಸರಕಾರವು ಮರಾಠಿಗರ ಮೇಲೆ 'ದೌರ್ಜನ್ಯ' ಮುಂದುವರಿಸಿದ್ದೇ ಆದರೆ, ಅದರೊಂದಿಗಿನ ಸಂಬಂಧ ಕಳೆದುಕೊಳ್ಳುವುದಾಗಿ ಶಿವಸೇನೆಯು ಮಿತ್ರಪಕ್ಷ ಬಿಜೆಪಿಗೆ ಎಚ್ಚರಿಕೆ ನೀಡಿರುವುದರೊಂದಿಗೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮತ್ತೊಂದು ತಿರುವಿಗೆ ಹೊರಳಿಕೊಂಡಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ವಿರೋಧಿಸಿದ ಮರಾಠಿಗರ ಮೇಲೆ ಕರ್ನಾಟಕದ ಬಿಜೆಪಿ ಸರಕಾರ ಬಲ ಪ್ರಯೋಗ ಮಾಡಿ, ಎನ್.ಡಿ.ಪಾಟೀಲ್ ಅವರಂತಹ ಹಿರಿಯ ಮುಖಂಡರನ್ನು ಬಂಧಿಸಿದೆ ಎಂದು ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷ ನಾಯಕ ರಾಮದಾಸ್ ಕದಮ್ ಹೇಳಿದ್ದಾರೆ.
ಈ ರೀತಿಯ ದೌರ್ಜನ್ಯ ಮುಂದುವರಿದರೆ, ಶಿವಸೇನೆಯು ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಳ್ಳಲಿದೆ ಎಂಬ ಸಂದೇಶವನ್ನು ಕರ್ನಾಟಕದ ಮರಾಠಿ ಜನತೆಗೆ ತಲುಪಿಸಲು ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ ಹೇಳಿದ್ದಾರೆ ಎಂದು ಬೆಳಗಾವಿಯಲ್ಲಿರುವ ರಾಮದಾಸ್ ಕದಂ ತಿಳಿಸಿದ್ದಾರೆ.
ಶಿವಸೇನೆಯ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಗಡಿ ವಿವಾದಕ್ಕೆ ಸಂಬಂಧಿಸಿ ತಮ್ಮ ಎರಡು ದಶಕಗಳ ಮೈತ್ರಿ ಮುರಿಯುವ ಬಗ್ಗೆ ಕದಂ ಹೇಳಿಕೆ ನೀಡಿದ್ದಕ್ಕೆ ಕಾರಣವೇನೆಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ಬಿಜೆಪಿಯು ಕರ್ನಾಟಕದ ಮರಾಠಿ ಭಾಷಿಗರ ಪರವಾಗಿದೆ ಮತ್ತು ಅವರಿಗಾಗುತ್ತಿರುವ ಅನ್ಯಾಯ ನಿಲ್ಲಬೇಕು ಎಂಬುದು ನಮ್ಮ ಭಾವನೆ ಎಂದೂ ಗಡ್ಕರಿ ನುಡಿದರು.
ಮರಾಠಿಗರ ಮೇಲಿನ 'ದೌರ್ಜನ್ಯ' ಮುಂದುವರಿದಲ್ಲಿ, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಹಾರಾಷ್ಟ್ರಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಶಿವಸೇನೆಯ ಕಾರ್ಯಾಧ್ಯಕ್ಷ ಉದ್ಧವ್ ಠಾಕ್ರೆ ಎಚ್ಚರಿಸಿದ್ದರು. ಮರಾಠಿಗರಿಗೆ ದನಕ್ಕೆ ಬಡಿದಂತೆ ಬಡಿಯಲಾಗುತ್ತದಿ, ಅವರ ತಲೆಯೊಡೆಯಲಾಗುತ್ತಿದೆ. ಮಹಾರಾಷ್ಟ್ರವು ಶಿವಾಜಿ ಹುಟ್ಟಿದ ನಾಡೆಂದು ನೆನಪಿರಲಿ ಎಂದೂ ಉದ್ಧವ್ ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ಎಚ್ಚರಿಸಿದ್ದರು.
ಕರ್ನಾಟಕ ವಿಧಾನಸಭೆಯ 9 ದಿನಗಳ ಅಧಿವೇಶನವು ಗಡಿ ಭಾಗವಾದ ಬೆಳಗಾವಿಯಲ್ಲಿ ಶನಿವಾರ ಆರಂಭವಾಗಿತ್ತು. ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಸೇರಿದಂತೆ ಕರ್ನಾಟಕದ 856 ಗ್ರಾಮಗಳು ಮತ್ತು ಪಟ್ಟಣಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಒತ್ತಾಯಿಸಿ ಹೋರಾಟ ಮಾಡುತ್ತಿತ್ತು. ಈ ಹಿಂದೆಯೂ ಗಡಿ ವಿವಾದವು ಹಿಂಸಾತ್ಮಕವಾಗಿದ್ದು, ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಬಾಕಿ ಇದೆ. |