ಇದ್ದಕ್ಕಿದ್ದಂತೆ ಕಾಣೆಯಾದ ಮತ್ತು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ, ಮುಂಬೈದಾಳಿ ನಡೆಸಿರುವ ಉಗ್ರರ ಪ್ರತ್ಯಕ್ಷದರ್ಶಿ ಮಹಿಳೆ ಅನಿತಾ ಉದಯ್ ವಿರುದ್ಧ ಪೊಲೀಸರು ಇದೀಗ ಸುಳ್ಳು ಮಾಹಿತಿ ಪಸರಿಸುತ್ತಿರುವ ಆರೋಪ ಹೊರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಕೆ ತನ್ನನ್ನು ಅಮೆರಿಕದ ಎಫ್‌ಬಿಐ ಅಧಿಕಾರಿಗಳು ಬಂದು ವಿಮಾನದಲ್ಲಿ ಕರೆದೊಯ್ದು, ತನಿಖೆ ನಡೆಸಿದ ಬಳಿಕ ಕಳುಹಿಸಿದರು ಎಂಬುದಾಗಿ ಕೆಲದಿನಗಳ ಹಿಂದೆ ಹೇಳಿಕೆ ನೀಡಿದ್ದರು.
47ರ ಹರೆಯದ ಗುಜುರಿ ವ್ಯಾಪಾರಿಯಾಗಿರುವ ಅನಿತಾ, ಇತರ ಕೆಲವು ನೆರೆಯವರೊಂದಿಗೆ ಬೋಟ್‌ನಿಂದ ಇಳಿದು ಬರುತ್ತಿದ್ದ ಉಗ್ರರನ್ನು ಗಮನಿಸಿದ್ದರು.
ಈ ಕಳೆದ ಭಾನುವಾರ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಬುಧವಾರ ಹಿಂತಿರುಗಿದ ಬಳಿಕ ತಾನು ಮುಂಬೈಯಿಂದ 250 ಕಿಮೀ ದೂರದಲ್ಲಿರುವ ಸತರಾಕ್ಕೆ ತೆರಳಿದ್ದಾಗಿ ಮೊದಲಿಗೆ ಹೇಳಿದ್ದರು. ಆದರೆ, ಇದಾದ ಬಳಿಕ ತನ್ನನ್ನು ವಿಚಾರಣೆಗಾಗಿ ಎಫ್‌ಬಿಐ ಬಂದು ಕರೆದೊಯ್ದಿತ್ತು ಎಂದು ಹೇಳಿದ್ದರು. ಇದರಿಂದ ಶಂಕಿತಗೊಂಡ ಮುಂಬೈ ಪೊಲೀಸರು ಆಕೆಯನ್ನು ಸೂಕ್ತವಾಗಿ ತನಿಖೆಗೊಳಪಡಿಸಿದಾಗ ಮಾಧ್ಯಮಗಳ ಗಮನಸೆಳೆಯಲು ಇಂತಹ ಕಥೆಯನ್ನು ಹೆಣೆದಿರುವುದಾಗಿ ತಿಳಿದು ಬಂದಿದೆ ಎನ್ನಲಾಗಿದೆ.
ಮುಂಬೈ ಪೊಲೀಸರು ಅನಿತಾ ಹಾಗೂ ಆಕೆಯ ಪುತ್ರಿ ಸೀಮಾಳನ್ನು ವಿಚಾರಣೆಗೊಳಪಡಿಸಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಇದಾದ ಬಳಿಕ ಈ ಮಹಿಳೆಯರ ವಿರುದ್ಧ ಪೊಲೀಸರು ವದಂತಿಗಳನ್ನು ಹಬ್ಬಿಸುತ್ತಿರುವುದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 182ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರ ತಪ್ಪು ಸಾಬೀತಾದರೆ, ಆರು ತಿಂಗಳ ತನಕ ಶಿಕ್ಷೆ ವಿಧಿಸಬಹುದಾಗಿದೆ.
ಕಫ್ ಪರಡೆ ಎಂಬ ಪ್ರದೇಶದಲ್ಲಿ ಮೀನುಗಾರ ಕಾಲನಿಯ 7x8ಅಡಿ ವಿಸ್ತಾರದ ಜೋಪಡಿಯಲ್ಲಿ ತನ್ನಿಬ್ಬರು ಮಕ್ಕಳೊಂದಿಗೆ ವಾಸಿಸುತ್ತಿರುವ ಅನಿತಾರ ಪತಿ ರೋಗ ಪೀಡಿತನಾಗಿದ್ದು ಸೈಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ರಿ ಸೀಮಾ ವಿವಾಹಿತಳಾಗಿದ್ದು ವಿರಾರ್‌ನಲ್ಲಿ ವಾಸಿಸುತ್ತಿದ್ದಾಳೆ.
ಸೀಮಾ ತನ್ನ ತಾಯಿ ಕಾಣೆಯಾಗಿದ್ದಾರೆ ಎಂಬುದಾಗಿ ದೂರು ನೀಡಿದ್ದಳು. ಬಳಿಕ ಅನಿತಾ ಹೇಳಿದ ಕಥೆಯನ್ನು ಬೆಂಬಲಿಸಿದ್ದಳು.
ಆದರೆ ಅನಿತಾ ಹೋಗಿದ್ದು, ಸತಾರದ ರಹಮತ್‌ಪುರಕ್ಕೆ ತೆರಳಿದ್ದರು ಎಂಬುದಾಗಿ ಜಂಟಿ ಪೊಲೀಸ್ ಆಯುಕ್ತ(ಅಪರಾಧಿ) ರಾಕೇಶ್ ಮಾರಿಯಾ ಹೇಳಿದ್ದಾರೆ. ಆದರೆ ಆಕೆಯ ಹೇಳಿಕೆ ಸುಳ್ಳು ಎಂಬುದನ್ನು ಪೊಲೀಸರು ಹೇಗೆ ಪತ್ತೆ ಹಚ್ಚಿದ್ದಾರೆ ಎಂಬುದನ್ನು ತಿಳಿಸಲಿಲ್ಲ. |