ಬಿಜೆಪಿಯೊಳಗೆ ನಾಯಕಸ್ಥಾನಕ್ಕೆ ಪೈಪೋಟಿ ಇದೆ ಎಂಬ ಊಹಾಪೋಹಗಳನ್ನೆಲ್ಲ ತಳ್ಳಿಹಾಕಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಮುಂದಿನ ಲೋಕಸಭಾ ಚುನಾವಣೆ ಬಳಿಕ ಎಲ್.ಕೆ.ಆಡ್ವಾಣಿ ಅವರೇ ಪ್ರಧಾನ ಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಚುನಾವಣೆ ಬಳಿಕ ಬಿಜೆಪಿ ಅಧಿಕಾರಕ್ಕೆ ಬರಲಿದೆ ಮತ್ತು ಆಡ್ವಾಣಿ ಅವರು ಪ್ರಧಾನಿಯಾಗಲಿದ್ದಾರೆ ಎಂದು ನರೇಂದ್ರ ಮೋದಿ ಅವರು ಸಮಾರಂಭ ಒಂದರಲ್ಲಿ ಮಾತನಾಡುತ್ತಾ ನುಡಿದರು.
ದೆಹಲಿಯಲ್ಲಿ ಕುಳಿತ ಕೆಲವರು ಗುಜರಾತಿನಲ್ಲಿ ನಡೆದ ಜಾಗತಿಕ ಹೂಡಿಕಾದಾರರ ಶೃಂಗದ ಯಶಸ್ಸನ್ನು ಬೇರೆಡೆ ಸೆಳೆಯಲು ಬಿಜೆಪಿಯಲ್ಲಿ ಪ್ರಧಾನಿ ಅಭ್ಯರ್ಥಿ ಪಟ್ಟದಲ್ಲಿ ಪೈಪೋಟಿ ಇದೆ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಕಟುಕಿದ್ದಾರೆ.
"ಗುಜರಾತಿನಲ್ಲಿ ಅಭಿವೃದ್ಧಿಗಳನ್ನು ಕಂಡಿರುವ ಬಳಿಕ, ಮುಂಬರುವ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂಬದಾಗಿ ದೆಹಲಿ ಇದೀಗ ಗುರುತಿಸಿದೆ. ಆಡ್ವಾಣಿ ಅವರೇ ಮುಂದಿನ ಪ್ರಧಾನಿ ಮತ್ತು ಅವರ ನಾಯಕತ್ವದಲ್ಲಿ ಭಾರತವು ಗುಜರಾತಿನಂತೆ ಕ್ಷಿಪ್ರ ಅಭಿವೃದ್ಧಿ ಕಾಣಲಿದೆ" ಎಂದು ಮೋದಿ ನುಡಿದರು.
ಹೂಡಿಕಾ ಸಮ್ಮೇಳನದಲ್ಲಿ 12 ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಸುಮಾರು 8,500 ತಿಳುವಳಿಕಾ ಪತ್ರಗಳಿಗೆ ಸಹಿಮಾಡಲಾಗಿದೆ ಎಂದು ಮೋದಿ ಹೇಳಿದರು.
ಮೋದಿಯವರನ್ನು ಹಾಡಿ ಹೊಗಳುತ್ತಾ ಉದ್ಯಮಿಗಳಾಗಿರುವ ಅನಿಲ್ ಅಂಬಾನಿ ಹಾಗೂ ಸುನಿಲ್ ಮಿತ್ತಲ್ ಅವರುಗಳು ಮೋದಿ ಪ್ರಧಾನಿಯಾಗಬಹುದು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದರು. |