ಒಬ್ಬ ರಾಜಕಾರಣಿಯಾಗಿ, ಹೊಸ ಪಾತ್ರದ ಮೂಲಕ ಉತ್ತರ ಪ್ರದೇಶದಲ್ಲಿ ಖ್ಯಾತಿ ಪಡೆಯುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಅವರು, ಈಗ ದೇಶದ ಜನತೆಯ ಸೇವೆ ಮಾಡಲು ತಾನು ರಾಜಕೀಯಕ್ಕೆ ಧುಮುಕಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಲಕ್ನೋ ಕ್ಷೇತ್ರದಿಂದ ಸ್ಪರ್ಧಿಸಲಿರುವ ಅವರು ತಮ್ಮ ಮೊದಲ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಹಾಗೂ ಅಮರ್ ಸಿಂಗ್ ಅವರಿಗೆ ಅಭಿನಂದನೆ ಸಲ್ಲಿಸಿದರು.ದತ್ ಅವರ ಮೊದಲ ಸುದ್ದಿಗೋಷ್ಠಿಯಲ್ಲಿ ಅವರ ಪತ್ನಿ ಮಾನ್ಯತಾ, ಸಮಾಜವಾದಿ ಪಕ್ಷದ ನಾಯಕರಾದ ಮುಲಾಯಂ ಸಿಂಗ್ ಯಾದವ್, ಅಮರ್ ಸಿಂಗ್, ನಟ ಮನೋಜ್ ತಿವಾರಿ, ಜಯಾ ಬಚ್ಚನ್ ಅವರು ಹಾಜರಿದ್ದರು.ನನ್ನ ತಂದೆ ಸುನೀಲ್ ದತ್ ಮರಣ ನಂತರ ನಾನು ಒಂಟಿಯಾಗಿದ್ದೆ, ಆದರೆ ಲಕ್ನೋಗೆ ಆಗಮಿಸಿದ ನಂತರ ಏಕಾಂಗಿ ಅಂತ ಅನಿಸುತ್ತಿಲ್ಲ. ಈಗ ನನ್ನೊಂದಿಗೆ ಅಮರ್ ಸಿಂಗ್ ಅವರಿದ್ದಾರೆ ಎಂದು ಹೇಳಿದರು. |