ಸತ್ಯಂ ಕಂಪ್ಯೂಟರ್‌ನ 7.800 ಕೋಟಿ ರೂಪಾಯಿ ಹಗರಣದ ತನಿಖೆ ನಡೆಸುತ್ತಿರುವ ಆಂಧ್ರದ ಸಿಐಡಿ ಪೊಲೀಸರು ಭಾನುವಾರ ಸಂಸ್ಥೆಯ ಮಾಜಿ ಅಧ್ಯಕ್ಷ ರಾಮಲಿಂಗರಾಜು, ಅವರ ಸೋದರ ರಾಮರಾಜು ಹಾಗೂ ಸಂಸ್ಥೆಯ ಮಾಜಿ ಹಿರಿಯ ಅಧಿಕಾರಿಯೊಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಶನಿವಾರದವರೆಗೆ ನ್ಯಾಯಾಂಗ ಬಂಧನದಲ್ಲಿದ್ದ ಅವರನ್ನು,ಭಾನುವಾರ ವಿಚಾರಣೆಗೆ ಒಳಪಡಿಸಲು ಆಂಧ್ರಪ್ರದೇಶ ಅಪರಾಧ ಪತ್ತೆ ದಳ ಪೊಲೀಸರಿಗೆ ಒಪ್ಪಿಸಲಾಗಿದೆ. ರಾಜು ಮತ್ತು ಅವರ ಸಹಚರರನ್ನು ಸಿಐಡಿ ಪೊಲೀಸರು, ಜನವರಿ 18ರಿಂದ22ರವರೆಗೆ ನಾಲ್ಕು ದಿನಗಳ ಕಾಲ ವಿಚಾರಣೆ ನಡೆಸಲಿದ್ದಾರೆ.
ಭಾನುವಾರ ಬೆಳಿಗ್ಗೆ ಚಂಚಲಗುಡಾ ಜೈಲಿಗೆ ಆಗಮಿಸಿದ ಸಿಐಡಿ ಪೊಲೀಸರ ತಂಡ ರಾಮಲಿಂಗರಾಜು, ಅವರ ಸೋದರ ಆಡಳಿತ ಮಂಡಳಿ ಮಾಜಿ ನಿರ್ದೇಶಕ ರಾಮರಾಜು ಮತ್ತು ಮಾಜಿ ಸಿಎಫ್‌ಓ ವಡ್ಲಮಣಿ ಶ್ರೀನಿವಾಸ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿತು.
ತನಿಖೆಯ ಸಂದರ್ಭದಲ್ಲಿ ಅವರ ಮೇಲೆ ಯಾವುದೇ ಬಲಪ್ರಯೋಗ ಮಾಡಬಾರದು, ಹಗಲು ಮಾತ್ರ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. |