ದೇಶದ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾನುವಾರ ತನ್ನ ಡ್ರೈವಿಂಗ್ ಲೈಸೆನ್ಸ್ ನವೀಕರಣಕ್ಕಾಗಿ ತಾನೇ ಖುದ್ದಾಗಿ ಪ್ರಾದೇಶಿಕ ಸಾರಿಗೆ ಕಚೇರಿ(ಆರ್‌ಟಿಓ) ತೆರಳಿ ಹಲವಾರು ಅಧಿಕಾರಿಗಳಿಗೆ ಆಶ್ಚರ್ಯ ಉಂಟುಮಾಡಿದರು.ಇಂದ್ರಪ್ರಸ್ಥದಲ್ಲಿರುವ ಆರ್‌ಟಿಓ ಕಚೇರಿಗೆ ಸಾಮಾನ್ಯ ಪ್ರಜೆಯಂತೆ ತೆರಳಿದ ಪ್ರಧಾನಿ ಕಚೇರಿಯಲ್ಲಿ ಸಾರಿಗೆ ಆಯುಕ್ತ ಅರ್.ಕೆ.ವರ್ಮಾ ಹಾಗೂ ಇತರ ಹಿರಿಯ ಅಧಿಕಾರಿಗಳನ್ನು ಭೇಟಿಯಾದರು ಎಂಬುದಾಗಿ ದೆಹಲಿ ಸರ್ಕಾರದ ಮೂಲಗಳು ತಿಳಿಸಿವೆ.76 ರ ಹರೆಯ ಸಿಂಗ್ ಜತೆಗೆ ಅವರ ಪತ್ನಿ ಗುರುರಶರಣ್ ಕೌರ್ ಮತ್ತು ಭದ್ರತಾ ಸಿಬ್ಬಂದಿಗಳಿದ್ದರು. ಪ್ರಧಾನಿಯವರೊಂದಿಗೆ ಅವರ ಪತ್ನಿ ಕೌರ್ ಸಹ ತನ್ನ ಲೈಸನ್ಸ್ ನವೀಕರಿಸಿಕೊಂಡರು. ವಾರದ ಇತರ ದಿನಗಳಲ್ಲಿ ಜನದಟ್ಟಣೆ ಇರುವ ಕಾರಣ ಈ ಭಾನುವಾರ ಭದ್ರತೆಯ ದೃಷ್ಟಿಯಿಂದ ವಿಶೇಷ ವ್ಯವಸ್ಥೆ ಮಾಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.ಪ್ರಧಾನಿಯವರು ತಮ್ಮ ವೈದ್ಯಕೀಯ ಅರ್ಹತಾ ಪತ್ರವನ್ನು ಸಲ್ಲಿಸಿದರು. ಹೊಸಪರವಾನಿಗೆಗಾಗಿ ಭಾವಚಿತ್ರಕ್ಕೆ ಮುಖ ಒಡ್ಡಿದರು. ಜನತೆ ಪರವಾನಿಗೆಗೆ ಅಗತ್ಯವಿರುವ ತಮ್ಮ ಬೆರಳಚ್ಚನ್ನು ನೀಡಿದರು. ಸುಮಾರು 30 ನಿಮಿಷಗಳ ಕಾಲ ಅವರು ಆರ್‌ಟಿಓ ಕಚೇರಿಯಲ್ಲಿ ವ್ಯಯಿಸಿದರು.ಮೋಟಾರು ವಾಹನಗಳ ಕಾಯ್ದೆಯ ಪ್ರಕಾರ 45ರ ಹರೆಯಕ್ಕಿಂತ ಮೇಲ್ಪಟ್ಟವರು ತಮ್ಮ ಪರವಾನಿಗೆಯನ್ನು ಪ್ರತೀ ಐದುವರ್ಷಗಳಿಗೊಮ್ಮೆ ನವೀಕರಿಸಬೇಕು.ಪಿ.ವಿ. ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಸಿಂಗ್ 1992ರಲ್ಲಿ ಇದೇ ಸಾರಿಗೆ ಕಚೇರಿಯಿಂದ ಲೈಸೆನ್ಸ್ ಪಡೆದಿದ್ದರು. |