ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಫೆ.8ರಂದು ಬಾಂಗ್ಲಾ ದೇಶಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಎಲ್ಲಾ ದ್ವಿಪಕ್ಷೀಯ ವಿಚಾರಗಳ ಕುರಿತು ಆಮೂಲಾಗ್ರವಾಗಿ ಚರ್ಚಿಸಲಿದ್ದಾರೆ. ಬಾಂಗ್ಲಾದಲ್ಲಿ ಶೇಕ್ ಹಸೀನಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತದ ಉನ್ನತ ನಾಯಕರೊಬ್ಬರು ಬಾಂಗ್ಲಾಗೆ ಭೇಟಿ ನೀಡುತ್ತಿರುವುದು ಇದು ಪ್ರಥಮ ಬಾರಿಯಾಗಿದೆ.
ಮುಖರ್ಜಿ ಅವರು ಎರಡು ದಿನಗಳ ಭೇಟಿಗಾಗಿ ಢಾಕಾಗೆ ಆಗಮಿಸಲಿದ್ದು, ಶೇಕ್ ಹಸೀನಾ ಸರ್ಕಾರ ಆಸ್ತಿತ್ವಕ್ಕೆ ಬಂದ ಬಳಿಕ ಇದೊಂದು ಸದ್ಭಾವನಾ ಭೇಟಿಯಾಗಿದೆ ಎಂದು ಬಾಂಗ್ಲಾ ವಿದೇಶಾಂಗ ಕಾರ್ಯದರ್ಶಿ ತೌಹಿದ್ ಹೊಸೈನ್ ವರದಿಗಾರರಿಗೆ ತಿಳಿಸಿದ್ದಾರೆ.
ಮುಖರ್ಜಿ ಅವರು ಬಾಂಗ್ಲಾ ವಿದೇಶಾಂಗ ಸಚಿವ ದಿಪು ಮೋನಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಮತ್ತು ಪ್ರಧಾನಿ ಹಸೀನಾರನ್ನು ಸೌಜನ್ಯಯುತ ಭೇಟಿ ಮಾಡಲಿದ್ದಾರೆ.
ಬಾಕಿಯುಳಿದಿರುವ ಎಲ್ಲಾ ದ್ವಿಪಕ್ಷೀಯ ವಿಚಾರಗಳ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವರು ಮಾತುಕತೆ ನಡೆಸಲಿದ್ದಾರೆ. ಆದರೆ ಯಾವುದೇ ವಿಚಾರದ ಕುರಿತು ಪ್ರಥಮ ಭೇಟಿಯಲ್ಲಿ ಆಳವಾದ ಚರ್ಚೆ ನಡೆಸಲಾರರು ಎನ್ನಲಾಗಿದೆ. |