ಉಪಚುನಾವಣೆಯಲ್ಲಿ ಸೋತ ಶಿಬುಸೊರೇನ್ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಳಿಕ ಉಂಟಾಗಿರುವ ರಾಜಕೀಯ ಬಿಕ್ಕಿಟ್ಟಿನ ಹಿನ್ನೆಲೆಯಲ್ಲಿ ಜಾರ್ಖಂಡ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರ ಸಂಪುಟ ಶಿಫಾರಸ್ಸು ಮಾಡಿದೆ.
ಸೋಮವಾರದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಜಾರ್ಖಂಡ್ ವಿಧಾನಸಭೆಯನ್ನು ಔಪಚಾರಿಕವಾಗಿ ಅಮಾನತ್ತಿನಲ್ಲಿ ಇಡಲಾಗಿದೆ.
ಕಳೆದೊಂದು ವಾರದಿಂದ ಜಾರ್ಖಂಡ್‌ನಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಮತ್ತು ರಾಜ್ಯಪಾಲ ಸಯೀದ್ ಸಿಬ್ಟಿ ರಾಜಿ ಅವರು ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲು ಸೋಮವಾರ ಸಭೆ ಸೇರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಾರ್ಖಂಡ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಶಿಫಾರಸ್ಸು ಮಾಡಿ ಶುಕ್ರವಾರ ರಾಜ್ಯಪಾಲರು ವಿಸ್ತೃತವಾದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರು. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿರುವುದಾಗಿ ರಾಜ್ಯಪಾಲರು ತನ್ನ ವರದಿಯಲ್ಲಿ ತಿಳಿಸಿದ್ದರು.
ಶಿಬುಸೊರೇನ್ ಅವರು ರಾಜೀನಾಮೆ ನೀಜಿರುವ ಬಳಿಕ ಆಡಳಿತಾರೂಢ ಯುಪಿಎ ಒಮ್ಮತದ ಅಭಿಪ್ರಾಯಕ್ಕೆ ಬರುವಲ್ಲಿ ವಿಫಲವಾಗಿರುವ ಕಾರಣ ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವಿಸಿತ್ತು. |