ಆಂಧ್ರ ಪ್ರದೇಶ ಅಪರಾಧಿ ತನಿಖಾ ವಿಭಾಗ(ಸಿಐಡಿ)ವು ಸತ್ಯಂ ಕಂಪ್ಯೂಟರ್ಸ್ ಸಂಸ್ಥಾಪಕ ರಾಮಲಿಂಗಾ ರಾಜುವಿನ ಇಮೇಲ್ ಜಾಡುಗಳನ್ನು ಪತ್ತೆ ಹಚ್ಚಲು ಸೈಬರ್ ತಜ್ಞರನ್ನು ಬಳಸಿಕೊಳ್ಳಲಿದೆ.
ಕಳೆದೊಂದು ತಿಂಗಳಲ್ಲಿ ತಾನು ಕಳುಹಿಸಿರುವ ಮತ್ತು ಸ್ವೀಕರಿಸಿರುವ ಇಮೇಲ್ ಸಂದೇಶಗಳನ್ನು ಗೋಲ್‌ಮಾಲ್ ರಾಜು ಅಳಿಸಿ ಹಾಕಿರುವುದಾಗಿ ಮೂಲಗಳು ಹೇಳಿವೆ.
ರಾಮಲಿಂಗಾ ರಾಜು ಹಾಗು ಅವರ ಸಹೋದರ ಸಂಸ್ಥೆಯ ಮಾಜಿ ಆಡಳಿತ ನಿರ್ದೇಶಕ ರಾಮ ರಾಜು ಹಾಗೂ ಮಾಜಿ ಹಣಕಾಸು ಅಧಿಕಾರಿ ವಡ್ಲಮಣಿ ಶ್ರೀನಿವಾಸ್ ಅವರನ್ನು ತನ್ನ ವಶಕ್ಕೆ ಪಡೆದಿರುವ ಸಿಐಡಿ ಇವರ ವಿಚಾರಣೆ ನಡೆಸುತ್ತಿದೆ.
ಕಾಣೆಯಾಗಿರುವ 7,000 ಕೋಟಿ ರೂಪಾಯಿ ಮತ್ತು 250 ಬೇನಾಮಿ ಕಂಪೆನಿಗಳಲ್ಲದೆ ಸಹೋದರರ ಹೆಸರಿನಲ್ಲಿದೆ ಎನ್ನಲಾಗಿರುವ ಸಾವಿರಾರು ಖಾತೆಗಳ ವಿವರ ಪತ್ತೆ ಹಚ್ಚಲು ಸಿಐಡಿ ಪ್ರಯತ್ನಿಸುತ್ತಿದೆ.
ರಾಜು ವಕೀಲರು ನ್ಯಾಯಾಲಯದಲ್ಲಿ ವಿನಂತಿಸಿರುವಂತೆ ತನಿಖೆಯ ವೇಳೆಗೆ ತೃತೀಯ ದರ್ಜೆಯ ಪ್ರಯೋಗ ಮಾಡಬಾರದು, ರಾತ್ರಿಯಲ್ಲಿ ವಿಚಾರಣೆ ನಡೆಸಬಾರದು ಮತ್ತು ವಕೀಲರ ಸಮಕ್ಷಮದಲ್ಲೇ ತನಿಖೆ ನಡೆಸಬೇಕು ಎಂದು ಹೈರದಾಬಾದಿನ ನ್ಯಾಯಾಲಯವು ನಿರ್ದೇಶನ ನೀಡಿದೆ.
ಮೂರು ಪ್ರಮುಖ ಕಾರ್ಯಸೂಚಿಯನ್ವಯ ಸಿಐಡಿ ಪ್ರಶ್ನಾವಳಿಗಳನ್ನು ತಯಾರಿಸಿದೆ. ಅವುಗಳೆಂದರೆ, *ಸತ್ಯಂ ಬ್ಯಾಲೆನ್ಸ್ ಶೀಟಿನಲ್ಲಿ ತೋರಿಸಲಾಗಿರುವ 7,000 ಕೋಟಿ ರೂಪಾಯಿ ಎಲ್ಲಿ ಹೋಗಿದೆ. ಈ ಹಣವನ್ನು ಹೇಗೆ ಮತ್ತು ಎಲ್ಲಿಗೆ ವರ್ಗಾಯಿಸಲಾಗಿದೆ ಮತ್ತು ಯಾವ ಕಾರ್ಯವಿಧಾನವನ್ನು ಅನುಸರಿಸಲಾಗಿದೆ ಎಂಬುದನ್ನು ಸಿಐಡಿ ತನಿಖೆ ನಡೆಸುತ್ತಿದೆ.
*ರಾಜು 250 ಬೇನಾಮಿ ಕಂಪೆನಿಗಳನ್ನು ಹೊಂದಿರುವ ಉದ್ದೇಶವೇನು ಎಂಬ ಕುರಿತು ಸಿಐಡಿ ತನಿಖೆ ನಡೆಸಲಿದೆ. ಇವುಗಳಲ್ಲಿ 37 ಕಂಪೆನಿಗಳು ಮೇತಾಸ್ ಎಂಬ ಹೆಸರಿನಲ್ಲಿದೆ ಹಾಗೂ ಇವುಗಳಲ್ಲಿ 17 ಕಂಪೆನಿಗಳನ್ನು 2007ರ ಫೆಬ್ರವರಿ ಒಂದೇ ತಿಂಗಳಲ್ಲಿ ಆರಂಭಿಸಿದೆ.
*ಈ ಮೂವರ ಬ್ಯಾಂಕ್ ಖಾತೆಗಳ ಕುರಿತೂ ಸಿಐಡಿ ತನಿಖೆ ನಡೆಸಲಿದೆ. ದೇಶ ಹಾಗೂ ವಿದೇಶಗಳಲ್ಲಿ ಸತ್ಯಂ ಅಪರಾಧಿಗಳು ಸಾವಿರಕ್ಕೂ ಅಧಿಕ ಖಾತೆಗಳನ್ನು ಹೊಂದಿರಬಹುದು ಎಂದು ಮೂಲಗಳು ಹೇಳಿವೆ.
ಅಪರಾಧಿಗಳು ಪುನರ್‌ಪರಿಶೀಲನಾ ಅರ್ಜಿಸಲ್ಲಿಸಲು ತಯಾರು ನಡೆಸುತ್ತಿದ್ದರೆ, ಇತ್ತ ಇತರ ತನಿಖಾ ಸಂಸ್ಥೆಗಳು ಈ ಗೋಲ್‌ಮಾಲ್ ತಂಡವನ್ನು ತನಿಖೆಗೊಳಪಡಿಸಲು ಸಿದ್ಧವಾಗಿವೆ.
ಭಾರತೀಯ ಶೇರು ವಿನಿಮಯ ಮಂಡಳಿ(ಸೆಬಿ) ಮತ್ತು ಗಂಭೀರ ವಂಚನೆ ತನಿಖಾ ಸಂಸ್ಥೆಯೂ ಸಹ ರಾಜು ಆಂಡ್ ಕೋವನ್ನು ಪ್ರಶ್ನಿಸಬಹುದಾಗಿದೆ.
ಆಂಧ್ರ ಪ್ರದೇಶ ಸರ್ಕಾರವು ಹರಿಬರಿಯಲ್ಲಿ ಮೇತಾಸ್ ಕಂಪೆನಿಗೆ ನೀಡಿರುವ ಹೈದರಾಬಾದ್ ಮೆಟ್ರೋ ಯೋಜನೆಯನ್ನು ರದ್ದು ಪಡಿಸುವುದಿಲ್ಲ ಎಂದು ರಾಜ್ಯದ ಹಣಕಾಸು ಸಚಿವಾಲಯವು ಹೇಳಿದೆ. |