ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರ ವಿಧಾನ ಮಂಡಳದ ಅಧಿವೇಶನ ನಡೆಸುತ್ತಿರುವುದರಿಂದ "ಬೆಳಗಾವಿಯಲ್ಲಿರುವ ಮರಾಠಿಗರ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ" ಎಂದು ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಅನಂತ್ ಗಾಡ್ಗೀಳ್ ಹೇಳಿದ್ದಾರೆ.
ಬೆಳಗಾವಿ ಗಡಿವಿವಾದದ ಹಿನ್ನೆಲೆಯಲ್ಲಿ ಶಿವ ಸೇನೆಯು ತಾಕತ್ತಿದ್ದರೆ ಬಿಜೆಪಿಯೊಂದಿಗಿನ ತನ್ನ ನಂಟನ್ನು ಕಡಿದುಕೊಳ್ಳಲಿ ಎಂದು ಹೇಳಿರುವ ಅವರು, ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳನ್ನು ವಿವಾದದ ಕುರಿತು ತೀರ್ಪು ಹೊರಬರುವ ತನಕ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
"50 ವರ್ಷಗಳ ಈ ವಿವಾದ ಇನ್ನೂ ಬಗೆಹರಿದಿಲ್ಲ. ಆದರೆ ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಈ ವಿವಾದಿತ ಸ್ಥಳಗಳಲ್ಲಿ ಮರಾಠಿ ಮಾತನಾಡುವ ಜನತೆಯ ದ್ವನಿಯನ್ನು ಅಡಗಿಸುವ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಅವರು ಹೇಳಿದರು.
ಬೆಳಗಾವಿ, ಕಾರವಾರ, ನಿಪ್ಪಾಣಿ, ಖಾನ್‌ಪುರ ಮತ್ತು ಇತರ ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಕಾಳಜಿ ಇದ್ದರೆ, ಶಿವಸೇನೆಯು ಬಿಜೆಪಿಯೊಂದಿಗಿನ ನಂಟನ್ನು ಕಳೆದುಕೊಳ್ಳಲಿ ಎಂದು ಗಾಡ್ಗೀಳ್ ನುಡಿದರು. ಮರಾಠಿಗರ ವಿರುದ್ಧ ಕರ್ನಾಟ ಘೋರ ದೌರ್ಜನ್ಯ ಎಸಗುತ್ತಿದೆ ಎಂದು ಶಿವಸೇನೆ ದೂರಿರುವ ಹಿನ್ನೆಲೆಯಲ್ಲಿ ಗಾಡ್ಗೀಳ್ ಈ ಸವಾಲು ಹಾಕಿದೆ.
|