ಕಾನೂನು ಬಾಹಿರವಾಗಿ 42 ಮರಗಳನ್ನು ಕಡಿದ ವ್ಯಕ್ತಿಯೊಬ್ಬನಿಗೆ 210 ಗಿಡಗಳನ್ನು ನೆಡುವ ಶಿಕ್ಷೆ ವಿಧಿಸಿರುವ ದೆಹಲಿಯ ನ್ಯಾಯಾಲಯ ಒಂದು ರಾಜಧಾನಿಯಲ್ಲಿ ಹಸಿರು ನಶಿಸುತ್ತಿರುವ ಹಿನ್ನೆಲೆಯಲ್ಲಿ ಮರಗಳ ಕಾನೂನಿಗೆ ಸಂಬಂಧಿಸಿದ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದೆ." ಮರಗಳು ನಗರದ ಶ್ವಾಸಕೋಶಗಳಿದ್ದಂತೆ. ಭೂಮಿಯಲ್ಲಿನ ಹಸಿರುಭಾಗವು ಸಂಕುಚಿತಗೊಳ್ಳುತ್ತಿದೆ ಎಂಬುದು ಸಾಮಾನ್ಯ ಜ್ಞಾನದ ವಿಚಾರ" ಎಂದು ದಂಡಾಧಿಕಾರಿ ದೇವೇಂದರ್ ಕುಮಾರ್ ಜಂಗಾಲ ಅವರು ಸುರೇಂದರ್ ವಾಸುದೇವ ಎಂಬ ವ್ಯಕ್ತಿಗೆ ಶಿಕ್ಷೆ ವಿಧಿಸುತ್ತಾ ನುಡಿದರು.ಒಂದು ಮರ ಕಡಿದುದಕ್ಕೆ ಪ್ರತಿಯಾಗಿ ಐದು ಗಿಡಗಳನ್ನು ನೆಡುವ ಶಿಕ್ಷೆ ವಿಧಿಸಿದ ನ್ಯಾಯಾಲಯ, ವಾಸುದೇವ ಅವರ ತಪ್ಪಿನಿಂದಾಗಿರುವ ಪರಿಣಾಮವನ್ನು ಕಡಿಮೆಗೊಳಿಸುವುದು ನ್ಯಾಯಾಲಯದ ಕರ್ತವ್ಯ ಎಂಬುದಾಗಿ ಶಿಕ್ಷೆ ಘೋಷಣೆ ವೇಳೆ ನುಡಿಯಿತು. ಆದರೆ ಉತ್ತಮ ವರ್ತನೆಯ ಎಚ್ಚರಿಕೆ ನೀಡಿ ಅಪರಾಧಿಯನ್ನು ಬಿಡುಗಡೆ ಮಾಡಲಾಯಿತು.ಮರಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ದೆಹಲಿ ಮರಗಳ ಸಂರಕ್ಷಣಾ ಕಾಯ್ದೆಯನ್ನು ಮರಗಳ ಸಂರಕ್ಷಣೆಯ ಸುರಕ್ಷೆಗಾಗಿ ಜಾರಿಗೆ ತರಲಾಗಿದೆ ಎಂದು ನ್ಯಾಯಾಲಯದ ಹೇಳಿದೆ. ತಾಜ್‌ಪುರ ಎಂಬ ಜಿಲ್ಲೆಯಲ್ಲಿ 2003ರಲ್ಲಿ 42 ಮರಗಳನ್ನು ಕಡಿದ ಅಪರಾಧವನ್ನು ವಾಸುದೇವ ಎದುರಿಸುತ್ತಿದ್ದರು. ಬಳಿಕ ಈತನ ವಿರುದ್ಧ 1994ರ ದೆಹಲಿ ಮರಗಳ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ತಾನು ಕಾನೂನಿನ ಅರಿವಿಲ್ಲದ ಕಾರಣ ಮರ ಕಡಿದಿರುವುದಾಗಿ ವಾಸುದೇವ ನ್ಯಾಯಾಲದ ಮುಂದೆ ತಪ್ಪೊಪ್ಪಿಕೊಂಡಿದ್ದರು. |