ಇನ್ನು ಕಳ್ಳರನ್ನು ಹಿಡಿಯಬೇಕಾಗಿರುವ ಪೊಲೀಸರು ತಮಿಳುನಾಡಿಗೆ ಹೋಗಿ ಜಲ್ಲಿಕಟ್ಟು ಎಂಬ ಗೂಳಿ ಪಳಗಿಸುವ ಕೂಟದಲ್ಲಿ ಪಳಗಿ ಬರಬೇಕಾಗುತ್ತದೆ. ಅಂಥದ್ದೊಂದು ಅವಸ್ಥೆಯನ್ನು ಎದುರಿಸಿದ್ದಾರೆ ಕೇರಳ ಪೊಲೀಸರು.
ತನ್ನನ್ನು ಬೆನ್ನಟ್ಟಿ ಬಂದ ಪೊಲೀಸರನ್ನು ಓಡಿಸಲು ಕಳ್ಳನೊಬ್ಬ ತಾನು ಸಾಕಿದ್ದ ಗೂಳಿಯನ್ನು ಛೂಬಿಟ್ಟು ಪೊಲೀಸರು 'ಜಲ್ಲಿ ಕಟ್ಟು' ಬಗ್ಗೆ ನೆನಪಿಸಿಕೊಳ್ಳುವಂತೆ ಮಾಡಿದ್ದಾನೆ.
ತನ್ನ ಭುಜ ಬಲ ಮತ್ತು ಹಾವುಗಳನ್ನು, ಗೂಳಿಗಳನ್ನು ಸಾಕುವ ವಿಚಿತ್ರ ಹವ್ಯಾಸದಿಂದಾಗಿ ಸ್ಥಳೀಯರಲ್ಲಿ ವೇಟ್ಟುಕುಟ್ಟನ್ ಎಂದೇ ಹೆಸರಾಗಿದ್ದ 30ರ ಹರೆಯದ ಪ್ರಕಾಶ್ ಎಂಬಾತನ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿ ಗೂಂಡಾ ಕಾಯಿದೆಯಡಿ ಹಲವು ಕೇಸುಗಳಿದ್ದವು. ಆತನ ಬಂಧನಕ್ಕೆ ತೆರಳಿದಾಗ ಆತ ತಾನು ಸಾಕಿದ್ದ ಗೂಳಿಯನ್ನೇ ಪೊಲೀಸರ ಮೇಲೆ ಛೂಬಿಟ್ಟಿದ್ದ.
ಜಲ್ಲಿಕಟ್ಟುಗೆ ಸಿದ್ಧವಾಗಿ ಅಲಂಕೃತವಾಗಿದ್ದ ಗೂಳಿಯನ್ನೇ ಆತ ಪೊಲೀಸರತ್ತ ಸನ್ನೆ ಮಾಡಿ ಕಳುಹಿಸಿದ್ದ. ಪೊಲೀಸರೆಲ್ಲ ಸೇರಿಕೊಂಡು ಕಷ್ಟಪಟ್ಟು ಹಗ್ಗದ ಸಹಾಯದಿಂದ ಗೂಳಿಯನ್ನು ಕಟ್ಟಿದರು. ಈ ಮಧ್ಯೆ ಅಲ್ಪ ಸ್ವಲ್ಪ ಗಾಯಗಳೂ ಆದವು. ಆ ಬಳಿಕ ಪ್ರಕಾಶನ ಹಿಂದೆ ಬಿದ್ದ ಪೊಲೀಸರು, ಆತನನ್ನೂ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿ, ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾರೆ.
ಪೊಲೀಸರ ಪ್ರಕಾರ, ಪ್ರಕಾಶ್ ಎಂಬ ಗೂಂಡಾ, ಪ್ರತಿ ವರ್ಷ ತಮಿಳುನಾಡಿನಲ್ಲಿ ನಡೆಯುವ 'ಜಲ್ಲಿಕಟ್ಟು' ಗೂಳಿ ಪಂದ್ಯಕ್ಕೆ ಎತ್ತುಗಳನ್ನು ಕರೆದೊಯ್ಯುತ್ತಿದ್ದ. ವಿಷಯುಕ್ತ ಹಾವುಗಳನ್ನು ಸಾಕುವುದು ಕೂಡ ಅವನ ಹವ್ಯಾಸಗಳಲ್ಲೊಂದು. ಹಲವು ಸಮಯದಿಂದ ಆತ ಪೊಲೀಸರ ಕೈಯಿಂದ ನುಣುಚಿಕೊಳ್ಳುತ್ತಲೇ ಇದ್ದ. |