ಹೈದರಾಬಾದ್: ಸತ್ಯಂ ಸ್ಥಾಪಕ ರಾಮಲಿಂಗಾ ರಾಜು ಹಗರಣಕ್ಕೂ ತನ್ನ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಾ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುವಿನತ್ತ ಬೆಟ್ಟು ಮಾಡುತ್ತಿದ್ದ ಆಂಧ್ರಪ್ರದೇಶದ ಹಾಲಿ ಮುಖ್ಯಮಂತ್ರಿ ವೈ.ಎಸ್.ಆರ್. ರೆಡ್ಡಿ ಅವರ ಆಡಳಿತಾವಧಿಯಲ್ಲಿ ವಿಶಾಕಪಟ್ಟಣಂನಲ್ಲಿ ಸತ್ಯಂಗೆ ವಿಶೇಷ ಆರ್ಥಿಕ ವಲಯ ಸ್ಥಾಪನೆಗಾಗಿ 50 ಎಕರೆ ಜಾಗವನ್ನು ಮುಖ್ಯಮಂತ್ರಿಗಳ ನಿರ್ದಿಷ್ಟ ಸೂಚನೆಯ ಮೇಲೆ ಮಂಜೂರು ಮಾಡಲಾಗಿದೆ ಎಂಬುದನ್ನು ಸರ್ಕಾರಿ ಆದೇಶ ಒಂದು ತಿಳಿಸುತ್ತಿದೆ.
ಸೋಮವಾರ ಮೇಡಂ(ಸೋನಿಯಾಗಾಂಧಿ)ಗೆ ಸತ್ಯಂ ಹಗರಣದ ಕುರಿತು ಮಾಹಿತಿ ನೀಡಲು ದೆಹಲಿಗೆ ತೆರಳಿದ್ದ ರೆಡ್ಡಿ, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ತಾನು ರಾಜುಗೆ ಸಹಾಯ ನೀಡಿರುವ ಸಾಧ್ಯತೆಯೇ ಇಲ್ಲವೆಂದು ಬಲವಾಗಿ ತಳ್ಳಿ ಹಾಕಿದ್ದರು.
7000 ಕೋಟಿ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ವಶಪಡಿಸಿಕೊಳ್ಳಲು ತನ್ನ ಸರ್ಕಾರ ಮೇತಾಸ್‌ಗೆ ಸಹಾಯ ಮಾಡಿದೆ ಎಂಬ ದೂರನ್ನೂ ಅವರು ತಳ್ಳಿಹಾಕಿದ್ದರು, ಅಲ್ಲದೆ ರಾಜ್ಯವು ಗುತ್ತಿಗೆಗಳ ಹರಾಜಿಗೆ ಪಾರದರ್ಶಕ ಮತ್ತು ಪೂರ್ಣ ಪ್ರಮಾಣದ ವ್ಯವಸ್ಥೆಯನ್ನು ಹೊಂದಿದೆ. ಸತ್ಯಂ ತನ್ನ ಸ್ಪರ್ಧಾತ್ಮ ಬಿಡ್ ಕಾರಣದಿಂದ ಭೂಮಿ ಮತ್ತು ಗುತ್ತಿಗೆಗಳನ್ನು ಪಡೆದಿದೆ ಎಂದು ಹೇಳಿದ್ದಾರೆ.
ಸತ್ಯಂ ಹಗರಣವನ್ನು ಸ್ಫೋಟಗೊಳಿಸಿರುವ ಕೆಲವೇ ದಿವಸಗಳಿಗೆ ಮುಂಚಿತವಾಗಿ 2008ರ ಡಿಸೆಂಬರ್ 4ರಂದು ನೀಡಲಾಗಿರುವ ಸರ್ಕಾರಿ ಆದೇಶವು ರಾಜುಗೆ ಸಹಾಯ ಮಾಡುವ ಉದ್ದೇಶದಿಂದ ಕಾನೂನುಗಳ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ.
ಭೂಮಿಯ ಬೆಲೆಯು ಪ್ರತಿ ಎಕರೆಗೆ 60 ಲಕ್ಷದಿಂದ 80 ಲಕ್ಷ ಬಾಳುತ್ತದೆ. ಬಿಡ್ ದರವು ನಾಲ್ಕು ಕೋಟಿಯಿಂದ 4.5 ಕೋಟಿಯ ತನಕವಿತ್ತು. ಆದರೆ ಸತ್ಯಂಗೆ ಈ ಭೂಮಿಯನ್ನು ಎಕರೆಯೊಂದಕ್ಕೆ 10 ಲಕ್ಷ ರೂಪಾಯಿಯಂತೆ ನೀಡಲಾಗಿದೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಕನಿಷ್ಠ 195 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವಿಶಾಖಪಟ್ಟಣಂ ಜಿಲ್ಲಾಧಿಕಾರಿ ಹೇಳುತ್ತಾರೆ. |