ಮುಂಬೈ ದಾಳಿ ನಡೆಸಿರುವ ಉಗ್ರ ಅಜ್ಮಲ್ ಅಮೀರ್ ಕಸಬ್ ವಿರುದ್ಧದ ಪುರಾವೆ ಕುರಿತಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್, ನರೇಂದ್ರ ಮೋದಿ ಪಾಕಿಸ್ತಾನದ 'ವಕೀಲ'ರಂತೆ ವರ್ತಿಸುತ್ತಿದ್ದಾರೆ ಎಂದು ದೂರಿದೆ. " ಮೋದಿಯವರ ಹೇಳಿಕೆಗಳು ಅವರೊಬ್ಬ ಪಾಕಿಸ್ತಾದ ವಕೀಲನೋ ಎಂಬಂತೆ ತೋರುತ್ತದೆ" ಎಂಬುದಾಗಿ ಕಾಂಗ್ರೆಸ್ ವಕ್ತಾರ ಶಕೀಲ್ ಅಹ್ಮದ್ ಹೇಳಿದ್ದಾರೆ.ಸುಮಾರು ಒಂದು ಡಜನ್ ರಾಷ್ಟ್ರಗಳ ಫಾರೆನ್ಸಿಕ್ ತಜ್ಞರು ಸೇರಿ ರಚಿಸಿರುವ ಪುರಾವೆ ಇದಾಗಿದ್ದು, ಇದಕ್ಕೆ ಮೋದಿಯ ಹೇಳಿಕೆ ಕಳಂಕ ಉಂಟು ಮಾಡಿದೆ ಎಂದು ಅಹ್ಮದ್ ತಿಳಿಸಿದ್ದಾರೆ." ಕಸಬ್ ವಿರುದ್ಧದ ಪುರಾವೆಯನ್ನು ಭಾರತವೇ ಸ್ವೀಕರಿಸುತ್ತಿಲ್ಲ ಎಂದಾದರೆ, ಪಾಕಿಸ್ತಾನ ಇದನ್ನು ಸ್ವೀಕರಿಸಲು ಹೇಗೆ ಸಾಧ್ಯ" ಎಂದು ಮೋದಿ ಪ್ರಶ್ನಿಸಿದ್ದರು." ಮೋದಿ ಇಂತಹ ಬೇಜವಾಬ್ದಾರಿಯ ಹೇಳಿಕೆಯನ್ನು ಯಾಕೆ ನೀಡಿದ್ದಾರೆ ಎಂಬುದಾಗಿ ಬಿಜೆಪಿಯು ಮೋದಿಯವರನ್ನು ಕೇಳಬೇಕು. ರಾಜಕೀಯ ಅಂಶಗಳಿಗಾಗಿ ಭಾರತದ ಮೇಲೆ ದಾಳಿ ನಡೆಸಿದವರನ್ನು ಬೆಂಬಲಿಸಲಾರಂಭಿಸುವುದು ನಿಜಕ್ಕೂ ದುರದೃಷ್ಟಕರ" ಎಂದು ಆಹ್ಮದ್ ಅಭಿಪ್ರಾಯಿಸಿದ್ದಾರೆ.ಈ ವಿಚಾರವನ್ನು 'ಅತ್ಯಂತ ಕಳವಳಕಾರಿ' ಎಂದು ಬಣ್ಣಿಸಿರುವ ಅಹ್ಮದ್, ಮೋದಿ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. |