ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮಂಗಳವಾರ ವಿಶೇಷ ನ್ಯಾಯಾಲಯದ ಮುಂದೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ 11 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.ಸುಮಾರು 4000 ಪುಟಗಳ ಆರೋಪಪಟ್ಟಿಯನ್ನು ಮೋಕಾ ನ್ಯಾಯಾಲಯದ ಮುಂದೆ ಪೊಲೀಸರು ಮಂಗಳವಾರ ಅಪರಾಹ್ನ ಸಲ್ಲಿಸಿದರು. ಎಲ್ಲಾ 11 ಆರೋಪಿಗಳ ವಿರುದ್ಧ ಮಾಲೆಗಾಂವ್ ಸ್ಫೋಟಕ್ಕೆ ಸಹಾಯ ನೀಡಿದ ಮತ್ತು ಸಂಚು ಹೂಡಿರುವ ಆರೋಪ ಮಾಡಲಾಗಿದೆ.ನವೆಂಬರ್ 26ರಂದು ಮುಂಬೈ ದಾಳಿಕೋರರ ಗುಂಡಿಗೆ ಆಹುತಿಯಾಗುವ ಮುನ್ನ ಜಂಟಿ ಆಯುಕ್ತ ಹೇಮಂತ್ ಕರ್ಕರೆ ಅವರು ಈ ಪ್ರಕರಣದ ತನಿಖೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವಾ ನಿರತ ಸೇನಾಧಿಕಾರಿ ಪ್ರಸಾದ್ ಶ್ರೀಕಾಂತ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಸ್ವಯಂ ಘೋಷಿತ ಸ್ವಾಮೀಜಿ ದಯಾನಂದ ಪಾಂಡೆ, ಶಿವನಾರಾಣ್ ಕಲ್ಸಂಗರ ಸಿಂಗ್, ಶಾಮ್ಲಾಲ್ ಸಧು, ಸಮೀರ್ ಕುಲಕರ್ಣಿ, ನಿವೃತ್ತ ಸೇನಾಧಿಕಾರಿ ರಮೇಶ್ ಉಪಾಧ್ಯಾಯ್, ಅಜಯ್ ರಾಹಿರ್ಕಾರ್, ರಾಕೇಶ್ ದಾವಡೆ, ಜಗದೀಶ್ ಮಹಾತ್ರೆ ಸೇರಿದಂತೆ ಒಟ್ಟು 11 ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.ಸಾಧ್ದಿ ಪ್ರಜ್ಞಾ ಹಾಗು ಸ್ಫೋಟದ ಪ್ರಮುಖ ಸಂಚುಗಾರ ರಾಮ್ಜಿ ಕಲ್ಸಂಗರ ಅವರ ನಡುವಿನ ಸಂಭಾಷಣೆಯ ಪ್ರತ್ಯಕ್ಷದರ್ಶಿ ಪುರಾವೆಯಲ್ಲದೆ, ಹಿಂದೂ ಸಂಘಟನೆ ಅಭಿನವ್ ಭಾರತ್‌ನ ಖಜಾಂಜಿ ಅಜಯ್ ಕುಮಾರ್ ರಾಹ್ರಿಕಾರ್ ಹೇಳಿಕೆಯನ್ನು ಪೊಲೀಸರು ದಾಖಿಸಿಕೊಂಡಿದ್ದಾರೆ. ಈತ ತನ್ನ ಸಂಘಟನೆಯಿಂದ ಸ್ಫೋಟಕ್ಕಾಗಿ 10 ಲಕ್ಷ ರೂಪಾಯಿ ವರ್ಗಾಯಿಸಿದ್ದ ಎನ್ನಲಾಗಿದೆ.ಶಿನ್ನಾಗಡದಲ್ಲಿ ಆರೋಪಿಗಳಿಗೆ ಶಸ್ತ್ರಾಸ್ತ್ರ ತರಬೇತಿಯನ್ನು ತಾನು ನೀಡಿರುವುದಾಗಿ ರಾಕೇಸ್ ದಾವಡೆ ಒಪ್ಪಿಕೊಂಡಿದ್ದಾರೆ. ಇಂಧೋರ್ ಗ್ಯಾರೇಜ್ ಮಾಲಕನೊಬ್ಬ ಮಾಲೆಗಾಂವ್ ಸ್ಫೋಟಕ್ಕೆ ಬಳಸಲಾಗಿರುವ ಬೈಕನ್ನು ರಾಮ್ಜಿ ತನ್ನ ವರ್ಕ್‌ಶಾಪ್‌ಗೆ ತಂದಿದ್ದ ಎಂದು ಹೇಳಿದ್ದಾನೆ. ಅಗತ್ಯವಿರುವ ಪುರಾವೆಗಳನ್ನು ಹೊಂದಿರುವುದಾಗಿ ಎಟಿಎಸ್ ಮುಖ್ಯಸ್ಥ ಕೆ.ಪಿ. ರಘುವಂಶಿ ಹೇಳಿದ್ದಾರೆ. ಅದಾಗ್ಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ದುರ್ಬಲ ಅಂಶಗಳು ಇವೆ ಎಂದು ಹೇಳಲಾಗಿದೆ.ಪ್ರಮುಖ ಆರೋಪಿಗಳಲ್ಲೊಬ್ಬರಾಗಿರುವ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಇನ್ನೂ ತಪ್ಪೊಪ್ಪಿಕೊಂಡಿಲ್ಲ. ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಸಾವು ತನಿಖೆಗೆ ಹಿನ್ನಡೆ ಉಂಟು ಮಾಡಿದ್ದರೂ, ತನಿಖೆಯನ್ನು ಮತ್ತೆ ಹಳಿಗೆ ತರಲಾಗಿದೆ. ಮಾಲೆಗಾಂವ್ ಸ್ಫೋಟದಲ್ಲಿ ಆರು ಮಂದಿ ಸತ್ತು ಇತರ 70 ಮಂದಿ ಗಾಯಗೊಂಡಿದ್ದರು. |