ಮುಂಬೈ ದಾಳಿಯ ವೇಳೆಗೆ ತನ್ನ ಜೀವದ ಹಂಗು ತೊರೆದು ಉಗ್ರರ ವಿರುದ್ಧ ಕಾದಾಡಿದ ಮುಂಬೈ ಎಎಸ್ಐ ತುಕಾರಾಂ ಒಂಬಳೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹಾಗೂ ಹವಾಲ್ದಾರ್ ಗಜೇಂದ್ರ ಸಿಂಗ್ ಅವರಿಗೆ ರಾಷ್ಟ್ರದ ಉನ್ನತ ಶೌರ್ಯ ಪ್ರಶಸ್ತಿ ಅಶೋಕ್ ಚಕ್ರ ನೀಡಿ ಗೌರವಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಹೇಳಲಾಗಿದೆ.
ಒಂಬಳೆ ಅವರ ಕೃತ್ಯವನ್ನು ಅಪ್ರತಿಮ ಧೈರ್ಯ ಪ್ರದರ್ಶನ ಎಂದು ಪರಿಗಣಿಸಲಾಗಿದೆ. ಇದೀಗ ಪೊಲೀಸರ ಬಂಧನದಲ್ಲಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್‌ನನ್ನು ಹಿಡಿಯು ವೇಳೆಗೆ ಅವರ ಮೇಲೆ ಐದು ಗುಂಡುಗಳನ್ನು ಎಸೆಯಲಾಗಿತ್ತು. ಆದರೂ ಧೃತಿಗೆಡದ ಅವರು ನೋವನ್ನು, ಪ್ರಾಣವನ್ನೂ ಲೆಕ್ಕಿಸದೆ ಉಗ್ರನನ್ನು ಗಟ್ಟಿಯಾಗಿ ಹಿಡಿದುಕೊಂಡಿರುವ ಕಾರಣ ಇಂದು ಕಸಬ್ ದಾಳಿಯ ಕುರಿತು ಮಾಹಿತಿಯ ಗಣಿಯಾಗಿ ತೋರಿಬಂದಿದ್ದಾನೆ.
ಇದಲ್ಲದೆ, ತಾಜ್ ಮತ್ತು ನಾರಿಮನ್ ಹೌಸ್‌ಗಳಲ್ಲಿ ಲಷ್ಕರೆ ಉಗ್ರರೊಂದಿಗೆ ಹೋರಾಡುವ ವೇಳೆ ಎನ್ಎಸ್‌ಜಿ ಅಧಿಕಾರಿಗಳಾಗಿದ್ದ ಸಂದೀಪ್ ಹಾಗೂ ಗಜೇಂದ್ರ ಉಗ್ರರ ಗುಂಡಿಗೀಡಾಗಿದ್ದರು.
ಗಣರಾಜ್ಯೋತ್ಸವದ ಪ್ರಶಸ್ತಿಗಳೂ ಇನ್ನೂ ಅಂತಿಮಗೊಂಡಿಲ್ಲ. ಕಡತಗಳು ರಕ್ಷಣಾ ಸಚಿವಾಲಯ, ಗೃಹಸಚಿವಾಲಯ ಹಾಗೂ ಪ್ರಧಾನಿ ಕಚೇರಿ ನಡುವೆ ಹಾರಾಡುತ್ತಿವೆ. ಮುಂಬೈ ಪೊಲೀಸ್ ಹಿರಿಯಾಧಿಕಾರಿಗಳಾಗಿದ್ದ ಹೇಮಂತ್ ಕರ್ಕರೆ, ವಿಜಯ್ ಸಾಲಸ್ಕರ್ ಹಾಗೂ ಅಶೋಕ್ ಕಾಮ್ಟೆ ಅವರಿಗೆ ಅಶೋಕ್ ಚಕ್ರ ನೀಡಲಾಗುವುದೇ ಇಲ್ಲ, ಕೀರ್ತಿ ಚಕ್ರ ನೀಡಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಿಲ್ಲ. ಗುಂಡೇಟು ತಗುಲಿದ್ದರೂ, ಕಾಮ್ಟೆ ಅವರು ಉಗ್ರನೊಬ್ಬನನ್ನು ಗಾಯಗೊಳಿಸುವಲ್ಲಿ ಸಫಲರಾಗಿದ್ದರು.
ಉಗ್ರರ ದಾಳಿಯ ವೇಳೆ ಹತರಾಗಿರುವ ಎಲ್ಲಾ ಪೊಲೀಸರಿಗೂ ಉನ್ನತ ಗೌರವಕ್ಕಾಗಿ ಮಹಾರಾಷ್ಟ್ರ ಸರ್ಕಾರ ಸರ್ವಾನ್ವಯದ ಶಿಫಾರಸ್ಸು ಮಾಡಿದೆ. ಆದರೆ ಕರ್ತವ್ಯ ಮತ್ತು ಶೌರ್ಯದ ವಿಶೇಷ ಕೃತ್ಯವನ್ನು ಪ್ರತ್ಯೇಕಿಸಲು ಕೇಂದ್ರವು ಶಿಫಾರಸ್ಸಿನೊಂದಿಗಿರುವ ವಿವರಣೆಯನ್ನು ಪರೀಕ್ಷಿಸುತ್ತಿದೆ. |