ನಿಮ್ಮ ಕ್ರಿಯೆಯನ್ನು ಇಡಿಯ ವಿಶ್ವವೇ ಗಮನಿಸುತ್ತಿರುವ ಈ ಸಂದರ್ಭದಲ್ಲಿ ಗಮನವನ್ನು ಬೇರೆಡೆ ಸೆಳೆಯುವ ಸರ್ಕಸ್ ಮಾಡದಿರಿ ಎಂಬುದಾಗಿ ಭಾರತ ಇಸ್ಲಾಮಾಬಾದ್‍ಗೆ ಹೇಳಿದೆ.
"ಈ ಹಂತದಲ್ಲಿ ದಿಕ್ಕು ತಪ್ಪಿಸುವ ಅಥವಾ ಗಮನವನ್ನು ಬೇರೆಡೆ ಹರಿಸುವ ಕಾರ್ಯವನ್ನು ಮಾಡದಿರುವುದು ಒಳಿತು ಎಂಬುದಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಆನಂದ್ ಶರ್ಮಾ ಹೇಳಿದ್ದಾರೆ.
ಪಾಕಿಸ್ತಾನವು ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಅವರನ್ನು ಒಪ್ಪಿಸಬೇಕು ಎಂಬುದಾಗಿ ಪಾಕಿಸ್ತಾನ ಕೇಳಲಿದೆ ಎಂಬ ಮಾಧ್ಯಮ ವರದಿಗಳ ಕುರಿತು ಪ್ರತಿಕ್ರಿಯಸಲು ಕೇಳಿದ ವೇಳೆಗೆ ಶರ್ಮಾ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
"ಪಾಕಿಸ್ತಾನದಲ್ಲಿ ನೆಲೆಸಿರುವ ಸಂಘಟನೆಯ ಪ್ರಚೋದನೆಯಿಂದ ಪಾಕಿಸ್ತಾನಿ ಪ್ರಜೆಗಳು ನಡಿಸಿದ್ದಾರೆ ಎಂಬುದಾಗಿ ದೃಢಪಟ್ಟಿರುವ ಮುಂಬೈ ದಾಳಿಯ ಕುರಿತು ನಾವು ಮಾತನಾಡುತ್ತಿದ್ದೇವೆ" ಇಂತಹ ವೇಳೆ ಪಾಕಿಸ್ತಾನವು ದಿಕ್ಕು ತಪ್ಪಿಸುವ ಕಾರ್ಯಕ್ಕೆ ಮುಂದಾಗಬಾರದು ಎಂದು ಹೇಳಿದ್ದಾರೆ.
ಮುಂಬೈ ದಾಳಿಗೆ ಸಂಬಂಧಿಸಿದಂತೆ ಜಂಟಿ ತನಿಖೆಗೆ ಪಾಕಿಸ್ತಾನ ನೀಡಿರುವ ಆಹ್ವಾನದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶರ್ಮಾ ಮೊದಲು ಪಾಕಿಸ್ತಾನವು ತನ್ನ ತನಿಖೆಯ ಬಗ್ಗೆ ತಿಳಿಸಲಿ ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಉಗ್ರವಾದಕ್ಕೆ ಒದಗಿರುವ ಮೂಲಸೌಕರ್ಯಗಳನ್ನು ತೊಡೆದು ಹಾಕಲು ಪಾಕಿಸ್ತಾನವು ಎಂತಹ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ ಮತ್ತು ದಾಳಿಯ ರೂವಾರಿಗಳನ್ನು ಕಾನೂನಿನ ಕಟಕಟೆಗೆ ತರಲು ಎಂತಹ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ಇಡಿಯ ವಿಶ್ವ ಸಮೂಹವೇ ವೀಕ್ಷಿಸುತ್ತಿದೆ ಎಂದು ಅವರು ನುಡಿದರು.
ಭಾರತವು ಮುಂಬೈ ದಾಳಿಯ ರೂವಾರಿಗಳನ್ನು ಒಪ್ಪಿಸಲೇಬೇಕು ಎಂಬುದಾಗಿ ಹಠಹಿಡಿದಲ್ಲಿ, ಪ್ರತಿಯಾಗಿ ಭಾರತವು 2007ರಲ್ಲಿ ಸಂಜೋತಾ ರೈಲಿನಲ್ಲಿ ಬಾಂಬ್ ಸ್ಫೋಟದ ಹಿಂದಿರುವ ವ್ಯಕ್ತಿಗಳನ್ನು ಒಪ್ಪಿಸಬೇಕು ಎಂದು ಒತ್ತಾಯಿಸಲಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ರೆಹ್ಮಾನ್ ಮಲಿಕ್ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. |