ಕರ್ನಾಟಕ - ಮಹಾರಾಷ್ಟ್ರದ ಗಡಿವಿವಾದದ ಕುರಿತು ಚರ್ಚಿಸಲು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಳಿ ನಿಯೋಗ ಒಂದನ್ನು ಒಯ್ಯುವುದಾಗಿ ಹೇಳಿರುವ ಶಿವಸೇನೆಯು ಸರ್ವಪಕ್ಷದ ಸದಸ್ಯರು ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಒತ್ತಾಯಿಸಿದೆ.
ಇಲ್ಲಿಗೆ ಸಮೀಪದ ಪಚೋರ ಎಂಬಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸೇನೆಯ ಕಾರ್ಯಾಧ್ಯಕ್ಷ ಉದ್ಭವ್ ಠಾಕ್ರೆ ಅವರು "ಬೆಳಗಾವಿ ಸಮಸ್ಯೆಗೆ ಸಂಬಂಧಿಸಿದಂತೆ ಬಿಜೆಪಿಯು ತನ್ನ ಕರ್ನಾಟಕ ಮುಖ್ಯಮಂತ್ರಿಯನ್ನು ನಿಯಂತ್ರಿಸಬೇಕು" ಎಂದು ನುಡಿದರು. ಅಲ್ಲದೆ, ತಾನು ಈ ಸಂಬಂಧ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಅವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಕಾಂಗ್ರೆಸ್ ತನ್ನ ಮುಖ್ಯಮಂತ್ರಿಯನ್ನು ಬದಲಾಯಿಸಿದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದಾಗಿ ನುಡಿದ ಅವರು ಮಹಾರಾಷ್ಟ್ರದ ಕಾಂಗ್ರೆಸ್-ಎನ್‌ಸಿಪಿ ಸರ್ಕಾರವನ್ನು ಟೀಕಿಸಿದರು.
ಮಾಲೆಗಾಂವ್ ಸ್ಫೋಟ ಆರೋಪಿಗಳು ಸಂಜೋತಾ ರೈಲು ಸ್ಫೋಟದಲ್ಲಿ ಭಾಗವಹಿಸಿದ್ದಾರೆನ್ನಲಾಗಿರುವ ಹಿನ್ನೆಲೆಯಲ್ಲಿ ಅವರನ್ನು ತಮಗೊಪ್ಪಿಸಬೇಕು ಎಂಬ ಪಾಕಿಸ್ತಾನದ ಹೇಳಿಕೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉದ್ಭವ್, ಈ ವಿಚಾರ ಭಾರತಕ್ಕೆ ಸಂಬಂಧಿಸಿರುವ ಕಾರಣ ಪಾಕಿಸ್ತಾನದ ಬೇಡಿಕೆ ಸರಿಯಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದೊಂದಿಗೆ ಭಾರತವು ಕ್ರೀಡೆ, ವ್ಯಾಪಾರ ಸೇರಿದಂತೆ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು. |