ಮುಂಬೈದಾಳಿಗೆ ಇರಾಕ್ ಮತ್ತು ಅಘ್ಘಾನಿಸ್ತಾನದಲ್ಲಿ ಅಮೆರಿಕದ ನೀತಿಯೇ ಕಾರಣ ಎಂಬುದಾಗಿ ದಾಳಿಯ ವೇಳೆಗೆ ಜೀವಂತ ಸೆರೆಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಎಫ್‌ಬಿಐ ತನಿಖೆಯ ವೇಳೆಗೆ ಹೇಳಿದ್ದಾನೆ ಎಂಬುದಾಗಿ ತನಿಖೆಯ ವಿವರಣೆಯನ್ನು ಬಲ್ಲ ಮೂಲಗಳು ಹೇಳಿವೆ. ಅಲ್ಲದೆ ಭಯೋತ್ಪಾದನೆಗೆ ಪ್ರಚೋದನೆ ನೀಡಿದ ವಿಚಾರದಲ್ಲಿ ಕಾಶ್ಮೀರ ವಿಚಾರವು ಗೌಣ ಎಂಬುದಾಗಿ ಹೇಳಿದ್ದಾನೆನ್ನಲಾಗಿದೆ.
ಹೆಚ್ಚಿನ ಪಾಶ್ಚಾತ್ಯ ಅಧಿಕಾರಿಗಳು ಮತ್ತು ವಿಶ್ಲೇಷಕರ ಪ್ರಕಾರ, ಅದರಲ್ಲೂ ವಿಶೇಷವಾಗಿ ಅಮೆರಿಕದ ನೂತನ ಅಧ್ಯಕ್ಷ ಒಬಾಮ ತಂಡ ಹಾಗೂ ಬ್ರಿಟಿಷ್ ಅಧಿಕಾರಿಗಳು, ಮುಂಬೈ ದಾಳಿ ಮತ್ತು ಕಾಶ್ಮೀರ ವಿವಾದಕ್ಕೆ ನೇರವಾದ ಸಂಪರ್ಕವನ್ನು ಥಳುಕು ಹಾಕಿದ್ದರು. ಆದರೆ ಭಾರತವು ಪಾಶ್ಚಾತ್ಯ ಅಧಿಕಾರಿಗಳ ಈ ಸಿದ್ಧಾಂತವನ್ನು ಸಾರಾಸಗಟಾಗಿ ತಳ್ಳಿಹಾಕಿತ್ತು.
ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಮಿಲಿಬಂದ್ ಅವರು ತನ್ನ ಪ್ರವಾಸದ ಸಂದರ್ಭದಲ್ಲಿ ಬರೆದಿರುವ ಲೇಖನದಲ್ಲಿ ಕಾಶ್ಮೀರ ಸಸ್ಯೆಗೆ ಪರಿಹಾರ ಕಂಡುಕೊಂಡಲ್ಲಿ ಪ್ರಾಂತ್ಯದಲ್ಲಿನ ಉಗ್ರವಾದಿಗಳನ್ನು ತೊಡೆದು ಹಾಕಬಹುದು ಎಂದು ಹೇಳಿದ್ದರು.
ಕಸಬ್‌ನನ್ನು ಎಫ್‌ಬಿಐ ತೀವ್ರ ತನಿಖೆಗೊಳಪಡಿಸಿದ್ದು, ಈ ವೇಳೆ ಪಾಕಿಸ್ತಾನದಲ್ಲಿನ ಭಯೋತ್ಪಾದನೆಗೆ ವಿಭಿನ್ನ ಕಾರಣವೆಂಬುದು ಬೆಳಕಿಗೆ ಬಂದಿದೆ. ಜಾರ್ಜ್ ಬುಶ್ ಆಡಳಿತ ವೇಳೆ ಆಫ್ಘಾನಿಸ್ತಾನ ಮತ್ತು ಇರಾಕಿನ ಮೇಲಿನ ದಾಳಿ ಹಾಗೂ ಮುಸ್ಲಿಮರನ್ನು ಕೆಟ್ಟದಾಗಿ ನಡೆಸಿಕೊಂಡಿರುವುದು ಆತನ ಭಯೋತ್ಪಾದನಾ ಕೃತ್ಯಕ್ಕೆ ಪ್ರಮುಖ ಕಾರಣ ಎಂದು ಹೇಳಿದ್ದಾನೆನ್ನಲಾಗಿದೆ. ಪಾಕಿಸ್ತಾನದಲ್ಲಿ ಹಲವಾರು ಯುವಕರು ಭಯೋತ್ಪಾದನೆಯನ್ನು ಅಪ್ಪಿಕೊಳ್ಳಲು ಅನಕ್ಷರತೆ ಹಾಗೂ ನಿರುದ್ಯೋಗಗಳು ಇತರ ಕಾರಣ ಎಂದು ಹೇಳಿದ್ದಾನೆ.
ಇದರೊಂದಿಗೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಶರಫ್ ಅವರು ಬುಶ್ ನೀತಿಗಳಿಗೆ ನೀಡಿರುವ ಬೆಂಬಲವೂ ಪಾಕಿಸ್ತಾನದಲ್ಲಿ ಜನರ ಭಾವನೆಗಳ ಮೇಲೆ ಪರಿಣಾಮ ಉಂಟು ಮಾಡಿದೆ ಮತ್ತು ಇದು ಉಗ್ರವಾದದ ವೃದ್ಧಿಗೆ ಕಾರಣ ಎಂದೂ ಕಸಬ್ ತನಿಖೆಯ ವೇಳೆಗೆ ಹೇಳಿದ್ದಾನೆ.
ದಾಳಿಯವೇಳೆಗೆ ಮಾಧ್ಯಮಗಳು ಅಥವಾ ಇತರ ಯಾರಾದರೂ ಸಂಪರ್ಕಿಸಿದರೆ, ಗುಜರಾತ್ ಮತ್ತು ಕಾಶ್ಮೀರದಲ್ಲಿನ ದಮನಿತ ಜನತೆಗಾಗಿ ತಾವು ಹೋರಾಟ ನಡೆಸುತ್ತಿದ್ದೇವೆ ಎಂಬುದಾಗಿ ಹೇಳಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾನೆ. ಎಫ್‌ಬಿಐ ಮುಂಬೈ ಕ್ರೈಂ ಬ್ರಾಂಚ್, ಸಿಬಿಐ ಅಧಿಕಾರಿಗಳ ಸಮಕ್ಷಮದಲ್ಲಿ ತನಿಖೆ ನಡೆಸಿದೆ. ಸಿಬಿಐ ತನ್ನೊಂದಿಗೆ ಪಂಜಾಬಿ ಅನುವಾದಕರನ್ನೂ ಕರೆತಂದಿತ್ತು. ಅಪರಾಹ್ನ ಆರಂಭಗೊಂಡ ತನಿಖೆಯು ಮಧ್ಯರಾತ್ರಿಯ ತನಕವೂ ಮುಂದುವರಿದಿತ್ತು. ತನಿಖೆಯ ವೇಳೆ ಎಫ್‌ಬಿಐ ಅಧಿಕಾರಿಗಳು ಮತ್ತು ಕಸಬ್ ಜತೆಗೆ ಊಟಮಾಡಿದರು ಎಂದು ಮೂಲಗಳು ತಿಳಿಸಿವೆ.
|