ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಉಪಾಧ್ಯಕ್ಷ ಕಲ್ಯಾಣ್ ಸಿಂಗ್ ಅವರು ಪಕ್ಷದಲ್ಲಿನ ತನ್ನೆಲ್ಲಾ ಸ್ಥಾನಗಳಿಗೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ತಾನು ಪಕ್ಷದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದೇನೆ ಎಂದು ಸಿಂಗ್ ದೂರಿದ್ದಾರೆ.
ಪಕ್ಷಾಧ್ಯಕ್ಷ ರಾಜ್‌ನಾಥ್ ಸಿಂಗ್ ಅವರಿಗೆ ತನ್ನ ರಾಜೀನಾಮೆ ಪತ್ರ ಸಲ್ಲಿಸಿರುವ 76ರ ಹರೆಯದ ಕಲ್ಯಾಣ್ ಸಿಂಗ್, ತಾನು ಅಸಂತುಷ್ಟನಾಗಿದ್ದು, ಪಕ್ಷದಲ್ಲಿ ಮುಂದುವರಿಯುವ ಕುರಿತು ರಾಜಿಯ ಮಾತೇ ಇಲ್ಲ ಎಂದು ಹೇಳಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ತನಗೆ ಮಂಜೂರು ಮಾಡಲಾಗಿರುವ ಇಟಾ ಸಂಸತ್ ಕ್ಷೇತ್ರವನ್ನು ಹಿಂತಿರುಗಿಸಿರುವುದಾಗಿಯೂ ಅವರು ಹೇಳಿದ್ದಾರೆ.
ಕಳೆದ ವಾರ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿರುವ ಕಲ್ಯಾಣ್ ಸಿಂಗ್ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಪಕ್ಷದ ಮೇಲೆ ದಾಳಿ ನಡೆಸಿದ್ದಾರೆ. ಕಲ್ಯಾಣ್ ಸಿಂಗ್ ಪುತ್ರ ರಾಜ್ವೀರ್ ಸಿಂಗ್ ಅವರಿಗೆ ತಮ್ಮ ಪಕ್ಷದಿಂದ ಸ್ಫರ್ಧಿಸುವಂತೆ ಮುಲಾಯಂ ಆಹ್ವಾನ ನೀಡಿದ್ದಾರೆ.
ಒಂದುಕಾಲದಲ್ಲಿ ಬಿಜೆಪಿಯ ಹಿಂದುತ್ವ ಮುಖವಾಗಿದ್ದ ಕಲ್ಯಾಣ್ ಸಿಂಗ್ ಈ ಹಿಂದೆಯೂ ಒಮ್ಮೆ ಪಕ್ಷ ತೊರೆದು ಬಳಿಕ ಮರಳಿದ್ದರು. ಬುಲಂದ್‌ಶಹರಿ ಸ್ಥಾನಕ್ಕೆ ಹಾಲಿ ಸಂಸದ ಅಶೋಕ್ ಪ್ರಧಾನ್ ಅವರ ಹೆಸರನ್ನು ಸೂಚಿಸಿರುವುದು ಕಲ್ಯಾಣ್ ಕೋಪಕ್ಕೆ ಕಾರಣ.
ಬಿಜೆಪಿಯಿಂದ ಆರೋಪಗಳ ನಿರಾಕರಣೆ ಅದಗ್ಯೂ ಕಲ್ಯಾಣ್ ಸಿಂಗ್ ಅರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ. ಅಲ್ಲದೆ ಕಲ್ಯಾಣ್ ಸಿಂಗ್ ವಿರೋಧಿಗಳ ಜತೆ ಕೈ ಜೋಡಿಸಿದ್ದಾರೆ ಎಂದು ದೂರಿದೆ.
ಕಲ್ಯಾಣ್ ಸಿಂಗ್ ನಮ್ಮ ಸೈದ್ಧಾಂತಿಕ ವಿರೋಧಿಗಳೊಂದಿಗೆ ಕೈ ಜೋಡಿಸಿದ್ದಾರೆ ಎಂದು ರಾಜೀವ್ ಪ್ರತಾಪ್ ರೂಢಿ ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ಆರೋಪಿಸಿದ್ದಾರೆ. |