ಮುಂಬೈ: ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಸೇವಾ ನಿರತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಅವರು 2007ರ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟಕ್ಕೆ ಬಳಸಿರುವ ಆರ್‌ಡಿಎಕ್ಸ್ ಪೂರೈಸಿದ್ದಾರೆ ಎಂಬುದಕ್ಕೆ ಪುರಾವೆಗಳಿಲ್ಲ ಎಂದು ಮಹಾರಾಷ್ಟ್ರ ಪೊಲೀಸರು ಮಂಗಳವಾರ ಹೇಳಿದ್ದಾರೆ.
"ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಯ ವೇಳೆಗೆ ಸಾಕ್ಷಿಯೊಬ್ಬ ಪುರೋಹಿತ್ ಅವರು ಸಂಜೋತಾ ರೈಲು ಸ್ಫೋಟಕ್ಕೆ ತಾನು ಅರ್‌ಡಿಎಕ್ಸ್ ಪೂರೈಸಿರುವುದಾಗಿ ಹೇಳಿದ್ದ" ಎಂಬುದಾಗಿ ಹೆಚ್ಚುವರಿ ಡಿಜಿಪಿ ಕೆ.ಪಿ.ರಘುವಂಶಿ ಅವರು ವರದಿಗಾರರಿಗೆ ತಿಳಿಸಿದ್ದಾರೆ.
"ಈ ಹೇಳಿಕೆಯನ್ನು ನೀಡಿದ್ದು ಓರ್ವ ಸಾಕ್ಷಿ ಮಾತ್ರ" ಎಂದು ಪೊಲೀಸಧಿಕಾರಿ ಸ್ಪಷ್ಟಪಡಿಸಿದ್ದಾರೆ
"ಈ ಕುರಿತು ಹರ್ಯಾಣ ಪೊಲೀಸರು ಪುರೋಹಿತ್ ಅವರನ್ನು ತನಿಖೆ ನಡೆಸಿದ್ದು, ಸಂಜೋತಾ ಸ್ಫೋಟದಲ್ಲಿ ಪುರೋಹಿತ್ ಅವರ ಸಂಭಾವ್ಯ ಪಾಲ್ಗೊಳ್ಳುವಿಕೆಯಲ್ಲಿ ಭಾಗಿಯಾಗಿರುವ ಬಗ್ಗೆ ಅವರು ಮಾತನಾಡಲು ಸಮರ್ಥರು ಎಂಬುದಾಗಿ ಎಟಿಎಸ್ ಮುಖ್ಯಸ್ಥರಾಗಿರುವ ಪೊಲೀಸಧಿಕಾರಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದರು.
ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತ ಯಾರೂ ಸಹ ಇತರ ಯಾವುದೇ ಸ್ಫೋಟದಲ್ಲಿ ಭಾಗವಹಿಸಿದ್ದಾರೆ ಎಂಬುದಕ್ಕೆ ಎಟಿಎಸ್‌ಗೆ ಯಾವುದೇ ಪುರಾವೆ ಲಭಿಸಿಲ್ಲ. ಅಲ್ಲದೆ ಅವರು ಭವಿಷ್ಯದಲ್ಲಿಯೂ ಯಾವುದೇ ಬಾಂಬ್ ಸ್ಫೋಟಕ್ಕೆ ಯೋಜನೆ ಹಾಕಿರುವುದೂ ತಿಳಿದಿಲ್ಲ.
ಪಾಕಿಸ್ತಾನವು ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಶ್ರೀಕಾಂತ್ ಪುರೋಹಿತ್‌ನನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕೋರಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ರಘುವಂಶಿ ಅವರ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ.
ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಎಟಿಎಸ್ ಮಂಗಳವಾರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಈ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದು ಇತರ 100 ಮಂದಿ ಗಾಯಗೊಂಡಿದ್ದರು. |