ಉಚ್ಚನ್ಯಾಯಾಲಯದ ನ್ಯಾಯಾಧೀಶರು ತಮ್ಮ ಆಸ್ತಿವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು ಎಂಬ ನಿರ್ದೇಶನವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ದೂರು ಸಲ್ಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿಕಸ್ ಕ್ಯೂರಿ(ನ್ಯಾಯಾಲಯ ಸ್ನೇಹಿ)ಯಾಗಿ ಸಹಕರಿಸಬೇಕು ಎಂಬುದಾಗಿ ದೆಹಲಿ ಹೈಕೋರ್ಟ್ ಮಾಡಿರುವ ವಿನಂತಿಯನ್ನು ತಳ್ಳಿಹಾಕಿರುವ ಸಂವಿಧಾನ ತಜ್ಞ ಫಾಲಿ ಎಸ್. ನಾರಿಮನ್ ಅವರು ನ್ಯಾಯಾಂಗಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದಾರೆ.
ಪ್ರಸಕ್ತ ವ್ಯಾಜ್ಯದಲ್ಲಿ ಸಹಾಯ ಮಾಡಲು ನಿರಾಕರಿಸುವುದಾಗಿ ನಾರಿಮನ್ ಅವರು ಹೈಕೋರ್ಟಿಗೆ ಎರಡು ವಾಕ್ಯಗಳ ಪತ್ರವನ್ನು ಕಳುಹಿಸಿದ್ದಾರೆ. ಇದಲ್ಲದೆ, ಈ ಕುರಿತು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರು ತಳೆದಿರುವ ನಿಲುವನ್ನು ತಾನು ವಿರೋಧಿಸುವುದಾಗಿ ತನ್ನ ಪ್ರಾಮಾಣಿಕ ಅನಿಸಿಕೆಯನ್ನು ವ್ಯಕ್ತಪಡಿಸುವ ದಾಖಲೆಯೊಂದನ್ನೂ ಅವರು ಲಗತ್ತಿಸಿದ್ದಾರೆ.
"ಪರಮೋಚ್ಛ ನ್ಯಾಯಾಲಯದ ನ್ಯಾಯಧೀಶರಿಗೆ ಪ್ರಜೆಗಳ ಜೀವನ ಮತ್ತು ಸಾವನ್ನು ನಿರ್ಧರಿಸುವ ಹಕ್ಕಿರುತ್ತದೆ. ತನ್ನ ಆದೇಶವನ್ನು ನಿಂದಿಸಿದವರನ್ನು ನ್ಯಾಯಾಧೀಶರು ಜೈಲಿಗೆ ತಳ್ಳಬಹುದಾಗಿದೆ. ಇಂತಹವರೂ ಸಹ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಿದೆ" ಎಂಬುದಾಗಿ ನಾರಿಮನ್ ಅವರು ದೈನಿಕ ಒಂದರ ಸಂಪಾದಕರಿಗೆ ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.
"ಈ ಮೂಲಕ ಅವರು ನಮ್ಮಂತ ಜನಸಾಮಾನ್ಯರ ಗೌರವವನ್ನು ಪಡೆಯಬೇಕು. ಭಾರತದಲ್ಲಿ ನಾವು ಉದಾಹರಣೆಗಳಿಂದಲೇ ಕಲಿಯುತ್ತೇವೆಯೇ ವಿನಹ, ನೈತಿಕ ಬೋಧನೆಯಿಂದ ಅಲ್ಲ. ತಮ್ಮ ಆಸ್ತಿಗಳ ವಿವರವನ್ನು ಬಹಿರಂಗ ಗೊಳಿಸಬೇಕೇ ಅಥವಾ ಬೇಡವೇ ಎಂಬುದಕ್ಕೆ ಅವರು ದಾವೆ ಹೂಡುವುದು; ಅವರು ಪಡೆಯುತ್ತಿರುವ ಸಂಬಳದಿಂದ ಆದಾಯ ತೆರಿಗೆ ಕಡಿತ ನ್ಯಾಯವೇ ಎಂದು ಪ್ರಶ್ನಿಸಿ ನ್ಯಾಯಾಲಯಕ್ಕೆ ತೆರಳುವಷ್ಟೆ ಕೆಟ್ಟದ್ದು. ನಾವು ಉತ್ತಮ ನ್ಯಾಯಾಧೀಶರನ್ನು ಹೊಂದಿದ್ದೇವೆ. ಆದರೆ ನಮಗೆ ಇನ್ನಷ್ಟು ನ್ಯಾಯಿಕ ವಿವೇಕದ ಅಗತ್ಯವಿದೆ" ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಸಲ್ಲಿಸಿರುವ ಅರ್ಜಿಯನ್ವಯ, ನ್ಯಾಯಾಧೀಶರ ಆಸ್ತಿ ಬಹಿರಂಗ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಆಯೋಗದ ನಿರ್ದೇಶನಕ್ಕೆ ಸೋಮವಾರ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅಲ್ಲದೆ, ಅಮಿಕಸ್ ಕ್ಯೂರಿ ಆಗುವಂತೆ ನರಿಮನ್ ಅವರನ್ನು ವಿನಂತಿಸಿತ್ತು. ಇದನ್ನು ನಿರಾಕರಿಸಿರುವ ಅವರು ವ್ಯಂಗ್ಯಮಿಶ್ರಿತ ಖಾರವಾದ ಉತ್ತರ ನೀಡಿದ್ದಾರೆ. |