ಮದರಸಗಳಲ್ಲಿ ಇಸ್ಲಾಂ ಮೂಲಭೂತವಾದವನ್ನು ಬೋಧಿಸಲಾಗುತ್ತಿದೆ ಎಂಬ ನಂಬಿಕೆಗೆ ವ್ಯತಿರಿಕ್ತವಾಗಿ, ಇಂಥ ಶಾಲೆಗಳಲ್ಲಿ ಕಲಿಯುವುದಕ್ಕಾಗಿ ಹಿಂದೂಗಳು ಕೂಡ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಇದು ಪಶ್ಚಿಮ ಬಂಗಾಳದ ಕಥೆ. ಇಲ್ಲಿನ ಮದರಸಗಳು ಇದೀಗ ಇಸ್ಲಾಮಿಕ್ ಶಿಕ್ಷಣದಿಂದ ತಮ್ಮ ಗಮನವನ್ನು ವಿಜ್ಞಾನ ಮತ್ತು ತಂತ್ರಜ್ಞಾನದತ್ತ ಹೊರಳಿಸಿರುವುದರಿಂದ ರಾಜ್ಯದ ನಾಲ್ಕು ಮದರಸಗಳಲ್ಲಿ ಮುಸಲ್ಮಾನರಿಗಿಂತಲೂ ಹೆಚ್ಚಾಗಿ ಹಿಂದೂ ವಿದ್ಯಾರ್ಥಿಗಳಿದ್ದಾರೆ ಎಂಬುದು ಕುತೂಹಲಕರ ಸಂಗತಿ. "ಹಿಂದೂ ವಿದ್ಯಾರ್ಥಿಗಳ ಸಂಖ್ಯೆ ಶೇ.57ರಿಂದ ಶೇ.64ರಷ್ಟಿದ್ದು, ಇದು ಮದರಸ ಮತ್ತು ಜಾತ್ಯತೀತತೆ ಕಾಲಾಭಾಸವಲ್ಲ ಎಂಬುದಕ್ಕೆ ಸಾಕ್ಷಿ" ಎಂದಿದ್ದಾರೆ ಪಶ್ಚಿಮ ಬಂಗಾಳ ಮದರಸ ಶಿಕ್ಷಣ ಮಂಡಳಿಯ ಅಧ್ಯಕ್ಷ ಸೋಹ್ರಾಬ್ ಹುಸೇನ್.
ಕಸಬಾ ಮದರಸದಲ್ಲಿರುವ 1077 ವಿದ್ಯಾರ್ಥಿಗಳಲ್ಲಿ 618 ಮಂದಿ ಹಿಂದೂಗಳು. ಅಂತೆಯೇ ಓರಗ್ರಾಮದಲ್ಲಿರುವ ಮದರಸದ 868 ಮಂದಿಯಲ್ಲಿ 554 ಹಿಂದೂ ವಿದ್ಯಾರ್ಥಿಗಳು. ಚಂದ್ರಕೋನದಲ್ಲಿ 312ರಲ್ಲಿ 201 ಮಂದಿ ಹಾಗೂ ಏಕಮುಖ ಮದರಸದಲ್ಲಿರುವ 480ರಲ್ಲಿ 290 ವಿದ್ಯಾರ್ಥಿಗಳು ಹಿಂದೂಗಳಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ನಮ್ಮ ವಿದ್ಯಾರ್ಥಿಗಳು ಕೇವಲ ಇಸ್ಲಾಂ ಸಂಬಂಧಿತ ವಿಷಯಗಳನ್ನಷ್ಟೇ ಕಲಿಯುತ್ತಾರೆ ಎಂಬುದು ತಪ್ಪು ನಂಬಿಕೆ. ಕಾಲ ಬದಲಾಗಿದೆ, ಹಾಗೆಯೇ ನಾವು ಕೂಡ ಬದಲಾಗಿದ್ದೇವೆ. ಈಗ ನಾವು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಒತ್ತು ನೀಡುತ್ತಿದ್ದೇವೆ. ರಾಜ್ಯದಲ್ಲಿ 42 ಮದರಸಗಳಲ್ಲಿ ಕಂಪ್ಯೂಟರ್ ಪ್ರಯೋಗಾಲಯಗಳಿವೆ ಎಂದು ಹುಸೇನ್ ಹೇಳಿದ್ದಾರೆ.
ಹಿಂದುಳಿದ ವರ್ಗದ ಹೊಸ ಪೀಳಿಗೆಯ ವಿದ್ಯಾರ್ಥಿಗಳು ಹೆಚ್ಚಾಗಿ ಮದರಸಕ್ಕೆ ಬರುತ್ತಾರೆ. ಯಾಕೆಂದರೆ ಅವರನ್ನು ಕೀಳಾಗಿ ಕಾಣುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ. ಮಾತ್ರವಲ್ಲದೆ, ಮದರಸ ಸರ್ಟಿಫಿಕೇಟ್‌ಗಳಿಗೆ ರಾಷ್ಟ್ರೀಯ ಮಟ್ಟದ ಪರೀಕ್ಷೆಯ ಮಾನ್ಯತೆಯೂ ಇದೆ ಎಂದು ಹುಸೇನ್ ತಿಳಿಸಿದರು.
ಪಶ್ಚಿಮ ಬಂಗಾಳದಲ್ಲಿ ಒಟ್ಟು 506 ಮದರಸಗಳಿದ್ದು, 2009ರೊಳಗೆ ಇನ್ನೂ 52 ಮದರಸಗಳು ತಲೆ ಎತ್ತಲಿವೆ. ರಾಜ್ಯದಲ್ಲಿ ಒಟ್ಟಾರೆಯಾಗಿ ಹೇಳುವುದಾದರೆ, ಶೇ.17ರಷ್ಟು ವಿದ್ಯಾರ್ಥಿಗಳು ಮತ್ತು ಶೇ.11 ಬೋಧಕರು ಮುಸ್ಲಿಮೇತರರು.
'ಮದರಸ ಮತ್ತು ರಾಜ್ಯ ಬೋರ್ಡ್ ಶಿಕ್ಷಣಕ್ರಮದಲ್ಲಿರುವ ಏಕೈಕ ವ್ಯತ್ಯಾಸವೆಂದರೆ, ನಮ್ಮ ವಿದ್ಯಾರ್ಥಿಗಳು ಅರೇಬಿಕ್ ಮತ್ತು ಇಸ್ಲಾಮಿಕ್ ಅಧ್ಯಯನದ 100 ಅಂಕದ ಪರೀಕ್ಷೆ ಬರೆಯಬೇಕಾಗುತ್ತದೆ. ಹಿಂದೂ ವಿದ್ಯಾರ್ಥಿಗಳು ಹೊಸ ಭಾಷೆ ಕಲಿತಂತಾಗುವುದರಿಂದ ಅವರಿಗೂ ಒಳ್ಳೆಯದು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ನಮ್ಮ ಮದರಸದ ಒಂದು ಕಿ.ಮೀ. ಆಸುಪಾಸಿನಲ್ಲಿ ಏಳು ಶಾಲೆಗಳಿವೆ. ಆದರೆ ಜನರು ತಮ್ಮ ಮಕ್ಕಳನ್ನು ಈ ಮದರಸಕ್ಕೆ ಕಳುಹಿಸಲು ಇಷ್ಟಪಡುತ್ತಾರೆ. ಯಾಕೆಂದರೆ, ಸಾಮಾನ್ಯ ಶಾಲೆಗಳಲ್ಲಿ 375 ರೂ. ಶುಲ್ಕ ಕೊಡಬೇಕಿದ್ದರೆ, ಮದರಸದಲ್ಲಿ ಕೇವಲ 110 ರೂ. ಮಾತ್ರ ನೀಡಿದರಾಯಿತು" ಎಂದು ಚಂದ್ರಕೋನ ಮದರಸದ ಹಿಂದೂ ಬೋಧಕ ಬಿಬಸ್ ಚಂದ್ರ ಗೊರುಯ್ ಅವರು ಹೇಳಿದ್ದಾರೆ. |