ಮಂಗಳವಾರ ಬಂಧನಕ್ಕೀಡಾಗಿರುವ ಬೆಂಗಳೂರು ಮತ್ತು ಸೂರತ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಪ್ರಮುಖ ಶಂಕಿತನೋರ್ವನನ್ನು ಇಂದು ಹೈದರಾಬಾದಿನ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು.ಬಂಧಿತ ಇ.ಟಿ. ಜೈನುದ್ದೀನ್ ಅಲಿಯಾಸ್ ಅಬ್ದುಲ್ ಸತ್ತಾರ್ ಎಂಬ 57ರ ಹರೆಯದ ಕೇರಳದ ಮಲಪ್ಪುರಂ ಎಂಬಲ್ಲಿನ ವ್ಯಕ್ತಿಯು ರಾಷ್ಟ್ರದ ವಿವಿಧೆಡೆ ನಡೆಸಲಾಗಿರುವ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲಾಗಿದೆ. ಈತನ್ನು ಆಂಧ್ರ ಪ್ರದೇಶ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.1998 ರಿಂದ ಹೈದರಾಬಾದಿನಲ್ಲಿ ವಾಸಿಸುತ್ತಿರುವ ಈತ ವಿವಿಧ ಬಡಾವಣೆಗಳ ಎಂಟು ಮನೆಗಳಲ್ಲಿ ವಾಸಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ರೇಡಿಯೂ ರಿಪೇರಿ ಪರಿಣತಿ ಹೊಂದಿರುವ ಈತ ಟೈಮರ್ ಡಿವೈಸ್ ತಯಾರಿಯಲ್ಲಿ ಪಳಗಿದ ಕೈ. ಬೆಂಗಳೂರು ಸ್ಫೋಟದ ವೇಳೆ ಇರಿಸಲಾಗಿದ್ದ ಟೈಮರ್‌ಗಳ ಸರ್ಕ್ಯೂಟ್‌ಗಳನ್ನು ಈತ ತಯಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಅಲ್ಲದೆ ಕಳೆದ ವರ್ಷ ಸೂರತ್‌ನಲ್ಲಿ ಪತ್ತೆಯಾಗಿರುವ ಸುಮಾರು 20ಕ್ಕಿಂತಲೂ ಅಧಿಕ ಸಜೀವ ಬಾಂಬ್‌ಗಳ ಟೈಮರ್ ಡಿವೈಸ್‌ಗಳನ್ನೂ ಈತನೆ ಸಿದ್ಧಪಡಿಸಿದ್ದಾನೆ ಎನ್ನಲಾಗಿದೆ.ಇಂಡಿಯನ್ ಮುಜಾಹಿದೀನ್‌ನ ಪ್ರಮುಖ ನಾಯಕ ರಿಯಾಜ್ ಬಟ್ಕಳ್‌ನೊಂದಿಗೆ ಬಂಧಿತ ಸತ್ತಾರ್ ನಿಕಟ ಸಂಪರ್ಕ ಹೊಂದಿದ್ದಾನೆನ್ನಲಾಗಿದೆ. ಈತ ರಿಯಾಜ್ ಹಾಗೂ ಇನ್ನೋರ್ವ ಶಂಕಿತ ಉಗ್ರ ಶೇಕ್ ಅಬ್ದುಲ್ ಜಬ್ಬಾರ್‌ನೊಂದಿಗೂ ನಿರಂತರ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. |