ಮುಂಬೈದಾಳಿಯ ವೇಳೆ ಉಗ್ರರ ದಾಳಿಯಲ್ಲಿ ಹತರಾಗಿರುವ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಹಾಗೂ ಎಎಸ್ಐ ತುಕಾರಾಂ ಓಂಬಳೆ ಅವರಿಗೆ ಮಾತ್ರ ಅಶೋಕ್ ಚಕ್ರ ನೀಡಲು ಯುಪಿಎ ಸರ್ಕಾರ ನಿರ್ಧರಿಸಿದೆ.
ಮುಂಬೈಮೇಲೆ ಉಗ್ರರು ದಾಳಿ ನಡೆಸಿರುವ ನವೆಂಬರ್ 26ರಂದು ರಾತ್ರಿ ಗಿರ್ಗಾಂವ್‌ನಲ್ಲಿ, ತನ್ನ ಮೈಗೆ ತಾಗಿದ ಗುಂಡನ್ನೂ ಲೆಕ್ಕಿಸದೆ ಪ್ರಾಣದ ಹಂಗು ತೊರೆದು, ಪ್ರಸಕ್ತ ಬಂಧನದಲ್ಲಿರುವ ಉಗ್ರ ಅಜ್ಮಲ್ ಅಮೀರ್ ಕಸಬ್‌ನನ್ನು ಗಟ್ಟಿಯಾಗಿ ಹಿಡಿದು ಆತನ ಸಜೀವ ಬಂಧನಕ್ಕೆ ಕಾರಣೀಭೂತವಾಗಿರುವ ಓಂಬಳೆ ಮತ್ತು ಕರ್ತವ್ಯದಲ್ಲಿರುವ ವೇಳೆಗೆ ಕಾಮಾ ಆಸ್ಪತ್ರೆಯಲ್ಲಿ ಉಗ್ರರ ಗುಂಡಿಗೀಡಾಗಿರುವ ಎಟಿಎಸ್ ಮುಖ್ಯಸ್ಥರಾಗಿದ್ದ ಹೈಮಂತ್ ಕರ್ಕರೆ ಅವರಿಗೆ ಮಾತ್ರ ಈ ಅತ್ಯುನ್ನತ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ.
ಮಹಾರಾಷ್ಟ್ರ ಸರ್ಕಾರ ಉಗ್ರರ ದಾಳಿಯ ವೇಳೆಗೆ ಹತರಾಗಿರುವ ಎಲ್ಲಾ 16 ಪೊಲೀಸರಿಗೂ ಶೌರ್ಯ ಪ್ರಶಸ್ತಿ ನೀಡಬೇಕು ಎಂದು ಶಿಫಾರಸ್ಸು ಮಾಡಿದೆ. ಇದರೊಂದಿಗೆ ಅಶೋಕ್ ಕಾಮ್ಟೆ, ವಿಜಯ್ ಸಾಲಸ್ಕರ್ ಮತ್ತು ಶಶಾಂಕ್ ಶಿಂಧೆ ಸೇರಿದಂತೆ ಆರು ಮಂದಿಗೆ ಕೀರ್ತಿ ಪ್ರಶಸ್ತಿ ಹಾಗೂ ಉಳಿದೆಲ್ಲರಿಗೆ ಪೊಲೀಸ್ ಶೌರ್ಯ ಪದಕಗಳನ್ನು ನೀಡಲು ನಿರ್ಧರಿಸಲಾಗಿದೆ.
"ಈ ಬಾರಿಯ ಗಣರಾಜ್ಯೋತ್ಸವದಂದು ಒಟ್ಟು ಒಂಬತ್ತು ಅಶೋಕ್ ಚಕ್ರವನ್ನು ನೀಡಲು ನಿರ್ಧರಿಸಲಾಗಿದೆ" ಎಂದು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ. 2001ರಲ್ಲಿ ಸಂಸತ್ ಭವನದ ಮೇಲಿನ ದಾಳಿಯ ಬಳಿಕ ಇದುವರೆಗೆ ಒಂದೇವರ್ಷದಲ್ಲಿ ಗರಿಷ್ಠ ಮೂರು ಅಶೋಕ ಚಕ್ರ ಪ್ರಶಸ್ತಿ ನೀಡಲಾಗಿತ್ತು. |