ಸತ್ಯಂ ಹಣವನ್ನು ತಾನು ತನ್ನ ಕುಟುಂಬದ ಇತರ ಎರಡು ರಿಯಲ್ ಎಸ್ಟೇಟ್ ಸಂಸ್ಥೆಗಳಿಗಾಗಿ ಬಳಸಿರುವುದನ್ನು ಸತ್ಯಂ ಸಂಸ್ಥೆಯಲ್ಲಿ ಅವ್ಯವಹಾರ ಎಸಗಿರುವ ಕುಖ್ಯಾತಿಯ ರಾಮಲಿಂಗಾ ರಾಜು ತನಿಖೆಯ ವೇಳೆಗೆ ಒಪ್ಪಿಕೊಂಡಿರುವುದಾಗಿ ಬುಧವಾರ ಆಂಧ್ರ ಪೊಲೀಸರು ಹೇಳಿದ್ದಾರೆ.ಆಂಧ್ರ ಪೊಲೀಸ್‌ನ ಅಪರಾಧಿ ತನಿಖಾ ವಿಭಾಗ(ಸಿಐಡಿ)ವು ಬುಧವಾರ ನಾಲ್ಕನೆ ದಿನ ರಾಜುವನ್ನು ತನಿಖೆಗೊಳಪಡಿಸಿದ್ದು, ಈ ವೇಳೆ ಕಳೆದ ಸುಮಾರು ನಾಲ್ಕರಿಂದ ಐದು ವರ್ಷಗಳ ಕಾಲ ಸತ್ಯಂ ಕಂಪೆನಿಯ ಹಣವನ್ನು ಇತರ ಸಂಸ್ಥೆಗಳಿಗಾಗಿ ಬಳಸಿ, ಈ ಹಣವನ್ನು ಹೈದರಾಬಾದಿನ ಸುತ್ತುಮುತ್ತಲಿನ ಪ್ರಮುಖ ಜಾಗಗಳನ್ನು ಖರೀದಿಸಲು ವಿನಿಯೋಗಿಸಲಾಗಿದೆ ಎಂಬ ಅಂಶವನ್ನು ರಾಜು ಹೇಳಿದ್ದಾರೆನ್ನಲಾಗಿದೆ.ಜನವರಿ ಏಳರಂದು ಸತ್ಯಂ ಕಂಪ್ಯೂಟರ್ಸ್‌ನ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ವೇಳೆಗೆ ವಾಸ್ತವವಾಗಿ ಇಲ್ಲದ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್ ತೋರಿಸಿರುವುದಾಗಿ ರಾಮಲಿಂಗಾ ರಾಜು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಜನವರಿ ಒಂಬತ್ತರಂದು ಅವರನ್ನು ಬಂಧಿಸಲಾಗಿತ್ತು. ಸಂಸ್ಥೆಯ ನೈಜ ವರಮಾನಕ್ಕೂ ಕಾಲ್ಪನಿಕ ವರಮಾನಕ್ಕೂ 7,800 ಕೋಟಿ ರೂಪಾಯಿ ವ್ಯತ್ಯಾಸ ಇದೆ ಎಂದು ಹೇಳಿದ್ದರು.ಬಂಧನವಾದ ತಕ್ಷಣದ ತನಿಖೆಯಲ್ಲೂ ಗೋಲ್ಮಾಲ್ ರಾಜು ಇದನ್ನೆ ಪುನರುಚ್ಚರಿಸಿದ್ದರೂ, ಇದೀಗ ಈ 'ಕಾಲ್ಪನಿಕ' ಮೊತ್ತದಲ್ಲಿ ದೊಡ್ಡಪಾಲು ಇತರ ಸಂಸ್ಥೆಗಳಿಗೆ ಸೋರಿದೆ ಎಂಬುದು ಗೊತ್ತಾಗಿದೆ ಎನ್ನಲಾಗಿದೆ. ತಾನು ಸತ್ಯಂ ಹಣವನ್ನು ತನ್ನ ಕುಟುಂಬದ ಇತರ ಸಂಸ್ಥೆಗಳಾದ ಮೇತಾಸ್ ಪ್ರಾಪರ್ಟಿಸ್ ಮತ್ತು ಮೇತಾಸ್ ಇನ್‌ಫ್ರಾಗೆ ಬಳಸಿದ್ದಾಗಿ ರಾಜು ಹೇಳಿದ್ದಾರೆ.ರಾಜು ಸತ್ಯಂ ಹಣವನ್ನು ಇತರ ಸಂಸ್ಥೆಗಳಿಗೆ ದುರುಪಯೋಗ ಮಾಡಿರುವುದಲ್ಲದೆ, ತನ್ನ ಕಂಪೆನಿಯ ಲೆಕ್ಕಪರಿಶೋಧಕರಿಗೂ ತಪ್ಪು ಲೆಕ್ಕಗಳನ್ನು ನೀಡಿದ್ದಾರೆ. ಪ್ರೈಸ್‌ವಾಟರ್‌ಹೌಸ್ ಕೂಪರ್ಸ್‌ಗೆ ತಪ್ಪು ಲೆಕ್ಕಗಳನ್ನು ಮತ್ತು ಖೊಟ್ಟಿ ಲೆಕ್ಕಪತ್ರಗಳನ್ನು ಸಲ್ಲಿಸಿರುವುದಾಗಿಯೂ ಒಪ್ಪಿಕೊಂಡಿದ್ದಾರೆ. ಸಿಐಡಿ ಹಾಗೂ ಕೆಲವು ನಿಯಂತ್ರಣಾ ಸಂಸ್ಥೆಗಳು ಪ್ರೈಸ್‌ವಾಟರ್‌ಹೌಸ್ ಕೂಪರ್ಸ್‌ನ ಕೆಲವು ದಾಖಲೆಗಳನ್ನು ಈಗಾಗಲೇ ವಶಪಡಿಸಿಕೊಂಡಿದ್ದಾರೆ.6,000 ನಕಲಿ ವೇತನ ಖಾತೆ ಇಷ್ಟೆ ಅಲ್ಲದೆ, ಕಳೆದ ಕೆಲವು ವರ್ಷಗಳಲ್ಲಿ ರಾಜು ಆರು ಸಾವಿರ ನಕಲಿ ವೇತನ ಖಾತೆಗಳನ್ನು ತೆರೆದೂ ಹೀಗೂ ಹಣವನ್ನು ವಂಚಿಸಿದ್ದಾರೆ. ನಾಲ್ಕು ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆದು ಇವುಗಳಿಗೆ ನಿರಕು ಠೇವಣಿಗಳಿಂದ ಹಣವನ್ನು ವರ್ಗಾಯಿಸಿದ್ದರು. ಈ ಹಣದಲ್ಲಿ ಹಲವುಭಾಗವು ರಾಜು ಖಾತೆಯ ಮೂಲಕ ವಿದೇಶಿ ಬ್ಯಾಂಕುಗಳಿಗೆ ಹರಿದಿವೆ.ತನ್ನ ಸಂಸ್ಥೆಯಲ್ಲಿ 53 ಸಾವಿರ ಸಿಬ್ಬಂದಿಗಳಿದ್ದಾರೆ ಎಂದು ಹೇಳಿರುವುದನ್ನು ಇದೀಗ ನಿಕಟವಾಗಿ ವೀಕ್ಷಿಸಲಾಗುತ್ತಿದೆ. ಈ ಸಂಖ್ಯೆಯ ಸತ್ಯಾಸತ್ಯತೆಯನನ್ನು ತಿಳಿಯಲು ಸರಕಾರಿ ನೇಮಿತ ಮಂಡಳಿಯು ಪ್ರಯತ್ನಿಸುತ್ತಿದೆ.ಇದೀಗ ಮೇತಾಸ್‌ಗೆ ಹಣ ಹರಿಸಲು ವಾಹಿನಿಯಾಗಿ ಬಳಸಿಕೊಂಡಿರುವ ಮಾರಿಶಸ್ ಮೂಲದ ಕಂಪೆನಿಯನ್ನು ಪತ್ತೆಹಚ್ಚಲು ಇದೀಗ ಕಂಪೆನಿಗಳ ನೋಂದಾವಣೆ(ಆರ್ಒಸಿ) ಮತ್ತು ಗಂಭೀರ ವಂಚನೆ ತನಿಖಾ ಕಚೇರಿ(ಎಸ್ಎಫ್ಐಒ) ಪ್ರಯತ್ನಿಸುತ್ತಿದೆ.ಕೇಂದ್ರ ಸರ್ಕಾರವು ರಾಜು ಕುಟುಂಬದ ಇನ್ನೆರಡು ಮೇತಾಸ್ ಸಂಸ್ಥೆಗಳನ್ನು ಸತ್ಯಂ ತನಿಖೆಯ ವ್ಯಾಪ್ತಿಗೊಳಪಡಿಸುವಂತೆ ಎಸ್ಎಫ್ಐಒಗೆ ತಿಳಿಸಿದೆ. ಇದೀಗಾಗಲೇ ತನಿಖಾ ತಂಡವು ಈ ಎರಡು ಸಂಸ್ಥೆಗಳ ಲೆಕ್ಕಪತ್ರಗಳನ್ನು ಪರೀಕ್ಷಿಸುತ್ತಿದೆ.ಇಷ್ಟಾಗಿಯೂ, ಮೇತಾಸ್ ಕಂಪೆನಿಗಳು ಮಾತ್ರ ಸತ್ಯಂನಿಂದ ಹಣ ಪಡೆದೇ ಇಲ್ಲ ಎಂದು ಹೇಳುತ್ತಿವೆ. |