ನವೆಂಬರ್ 26ರ ನರಮೇಧವನ್ನು ನಿಭಾಯಿಸುವ ವೈಫಲ್ಯದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಉನ್ನತ ಮಟ್ಟದ ಆಯೋಗವು ಐಎಎಸ್ ಮತ್ತು ಐಪಿಸ್ ಅಧಿಕಾರಿಗಳಿಗೆ ಒಂದು ಸುದೀರ್ಘವಾದ ಪ್ರಶ್ನಾವಳಿಯನ್ನು ಕಳುಹಿಸಿದ್ದು, ಅವರ ಚಲನವಲನಗಳ ನಿಖರ ವಿವರಣೆ ಕೇಳಿದೆ.ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಜಾನಿ ಜೋಸೆಫ್, ಹೆಚ್ಚುವರಿ ಮುಖ್ಯಕಾರ್ಯದರ್ಶಿ(ಗೃಹ) ಚಿತ್ಕಲ ಜಸ್ಟಿ, ಡಿಜಿಪಿ ಎ.ಎನ್. ರಾಯ್, ಪೊಲೀಸ್ ಆಯುಕ್ತ ಹಸನ್ ಗಫೂರ್ ಮತ್ತು ಕ್ರೈಂ ಬ್ರಾಂಚ್ ಮುಖ್ಯಸ್ಥ ರಾಕೇಶ್ ಮಾರಿಯಾ ಸೇರಿದಂತೆ 25 ಅಧಿಕಾರಿಗಳಿಗೆ ಪ್ರಶ್ನಾವಳಿ ಕಳುಹಿಸಿ ಇದೀಗಲೇ ಒಂದು ವಾರ ಕಳೆದಿದೆ.ಅರುಣಾಚಲ ಪ್ರದೇಶದ ಮಾಜಿ ರಾಜ್ಯಪಾಲ ರಾಮ್ ಪ್ರಧಾನ್ ಮತ್ತು ಮಾಜಿ ವಿಶೇಷ ಕಾರ್ಯದರ್ಶಿ ವಿ. ಬಾಲಚಂದ್ರನ್ ಅವರನ್ನೊಳಗೊಂಡ ಈ ಸಮಿತಿ, ಆ ಭಯಾನಕ ರಕ್ತಸಿಕ್ತ ರಾತ್ರಿ ಹಾಗೂ ಮರುದಿನದ ಈ ಅಧಿಕಾರಿಗಳ ಚಲನವಲನದ ನಿರ್ದಿಷ್ಟ ವಿವರಗಳು ಮತ್ತು ಗುಪ್ತಚರ ಸಂಸ್ಥೆಗಳು ನೀಡಿರುವ ಗುಪ್ತಚರ ಮಾಹಿತಿಗೆ ಕೈಗೊಂಡಿರುವ ಕ್ರಮಗಳ ವಿವರಣೆಯನ್ನು ಕೋರಿದೆ.ಸಿಎಸ್‌ಟಿ, ತಾಜ್, ಒಬೇರಾಯ್, ನಾರಿಮನ್‌ಗಳಲ್ಲಿ ಉಗ್ರರ ದಾಳಿಯ ಸುದ್ದಿ ಬಿತ್ತರವಾಗುತ್ತಿರುವಂತೆ ಕೆಳ ಹಂತದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದರೂ, ಕೆಲವೇ ಐಪಿಎಸ್ ಅಧಿಕಾರಿಗಳನ್ನು ಹೊರತುಪಡಿಸಿದರೆ, ಹೆಚ್ಚಿನ ಹಿರಿಯ ಅಧಿಕಾರಿಗಳು ಸ್ಥಳದಲ್ಲಿರಲಿಲ್ಲ.ಈ ಕುರಿತು ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷವು ಈ ಕುರಿತು ಪ್ರಸ್ತಾಪಿಸಿ ವಾಗ್ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಅವರು ಇದಕ್ಕಾಗಿ ದ್ವಿಸದಸ್ಯ ಸಮಿತಿಯನ್ನು ನೇಮಿಸುವುದಾಗಿ ಹೇಳಿದ್ದರು.ನೈತಿಕ ಹೊಣೆಹೊತ್ತು ಆಗಿನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ತಮ್ಮ ಸ್ಥಾನ ತೊರೆದಿದ್ದರೂ, ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿಲ್ಲ ಎಂದು ದೂರಿರುವ ವಿರೋಧ ಪಕ್ಷಗಳು, ರಾಯ್, ಚಿತ್ಕಲಾ ಹಾಗೂ ಗಫೂರ್ ಅವರುಗಳ ಎತ್ತಂಗಡಿಗೂ ಒತ್ತಾಯಿಸಿವೆ. |