ಸತ್ಯಂ ಹಗರಣದ ಪ್ರಮುಖ ಆರೋಪಿಗಳ ಪೊಲೀಸ್ ಬಂಧನವನ್ನು ನಾಳೆಗೆ ವಿಸ್ತರಿಸಲಾಗಿದೆ.
ಹೈದರಾಬಾದಿನ ನ್ಯಾಯಾಲಯದ ವಿಚಾರಣೆ ವೇಳೆಗೆ, ಸತ್ಯಂ ರಾಜು ಕನಿಷ್ಠ ಹತ್ತುಸಾವಿರ ನಕಲಿ ವೇತನ ಖಾತೆಗಳನ್ನು ಸೃಷ್ಟಿಸಿದ್ದರು ಎಂಬುದಾಗಿ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಕಂಪೆನಿಯಲ್ಲಿ ನಿಜವಾಗಿಯೂ ಇರುವುದು ಒಟ್ಟು 40 ಸಾವಿರ ಸಿಬ್ಬಂದಿಗಳೇ ವಿನಹ 53 ಸಾವಿರ ಸಿಬ್ಬಂದಿಗಳಲ್ಲ. ಹಾಗೂ 3 ಸಾವಿರ ಸಿಬ್ಬಂದಿಗಳು ಇತರ ವರ್ಗದಲ್ಲಿ ಬರುತ್ತಾರೆ ಎಂದು ಸರಕಾರಿ ಅಭಿಯೋಜಕರು ಹೇಳಿದ್ದಾರೆ.
ರಾಜು ಹಾಗೂ ಸಂಸ್ಥೆಯ ಮಾಜಿ ಹಣಕಾಸು ಅಧಿಕಾರಿ ಈ ಅಸ್ತಿತ್ವದಲ್ಲಿಲ್ಲದ ಸಿಬ್ಬಂದಿಗಳ ಸಂಬಳವನ್ನು ಬ್ಯಾಂಕಿನಿಂದ ಪಡೆಯುತ್ತಿದ್ದುದಾಗಿ ತನಿಖೆಯ ವೇಳೆಗೆ ಒಪ್ಪಿಕೊಂಡಿದ್ದಾರೆ.
ಅಲ್ಲದೆ ಪ್ರತಿ ತಿಂಗಳು ರಾಜು 20 ಕೋಟಿ ರೂಪಾಯಿಯನ್ನು ಸತ್ಯಂನಿಂದ ಲಪಟಾಯಿಸುತ್ತಿದ್ದರು. ಅತ್ಯಧಿಕ ಮೌಲ್ಯದ ಸಾವಿರಾರು ಎಕರೆಯ ಸುಮಾರು 400ಕ್ಕೂ ಅಧಿಕ ಬೇನಾಮಿ ಭೂ ವರ್ಗಾವಣೆ ಮಾಡಲಾಗಿದೆ ಎಂದು ತನಿಖೆಯಿಂದ ಗೊತ್ತಾಗಿದೆ ಎಂದು ನ್ಯಾಯಲಯಕ್ಕೆ ತಿಳಿಸಲಾಗಿದೆ.
ತಿಂಗಳೊಂದರ 20 ಕೋಟಿಯಂತೆ ರಾಜು ಹಲವು ವರ್ಷಗಳ ಕಾಲ ದೋಚಿದ್ದು ಸುಮಾರು 1,250 ಕೋಟಿ ರೂಪಾಯಿಗಳನ್ನು ಗುಳುಂ ಮಾಡಿರುವುದಾಗಿ ಸರಕಾರಿ ವಕೀಲರು ಹೇಳಿದ್ದಾರೆ. |