ಹತ್ತುವರ್ಷಗಳ ಹಿಂದೆ ಉಗ್ರರು ಕಾಂಧಾರ್ ವಿಮಾನ ಅಪಹರಿಸಿದ ವೇಳೆ ಉಗ್ರರನ್ನು ಬಿಡುಗಡೆ ಮಾಡಿರುವ ಎನ್‌ಡಿಎ ಕ್ರಮವು ಹಲವು ಕೋನಗಳಿಂದ ಟೀಕೆಗೆ ಒಳಗಾಗಿರಬಹುದು. ಆದರೆ ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ನಿರ್ಧಾರ ಕೈಗೊಳ್ಳುವುದು 'ಅತ್ಯಂತ ಕಷ್ಟಕರ' ಎಂದು ಗೃಹಸಚಿವ ಪಿ. ಚಿದಂಬರಂ ಹೇಳಿದ್ದಾರೆ.
"150 ಕುಟುಂಬಗಳು ಬಂದು ತಮ್ಮ ಪ್ರೀತಿಪಾತ್ರರನ್ನು ರಕ್ಷಿಸಿ ಎಂಬುದಾಗಿ ನನ್ನ ಬಳಿ ವಿನಂತಿಸುತ್ತಿದ್ದರೆ, ನಾನು ಹೇಗೆ ಪ್ರತಿಕ್ರಿಯಿಸುತ್ತಿದ್ದೆನೆಂದು ಗೊತ್ತಿಲ್ಲ. ಟೀಕಿಸಲು ತುಂಬ ಸುಲಭ. ಆದರೆ ಅಂತಹ ಪರಿಸ್ಥಿತಿಯಲ್ಲಿರುವವರಿಗೆ ನಿರ್ಧಾರ ಕೈಗೊಳ್ಳುವುದು ತುಂಬ ಕಷ್ಟ" ಎಂಬುದಾಗಿ ಎನ್‌ಡಿಟಿವಿಯ ಇಂಡಿಯನ್ ಆಫ್ ದಿ ಇಯರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡುತ್ತಾ ನುಡಿದರು.
ವಿಶ್ವದಲ್ಲಿನ ಕೆಲವು ಸರ್ಕಾರಗಳು ಉಗ್ರರೊಂದಿಗೆ ಯಾವುದೇ ಕಾರಣಕ್ಕೂ ಮಾತುಕತೆ ನಡೆಸಲು ಮುಂದಾಗುವುದಿಲ್ಲ ಎಂಬುದಾಗಿ ನಿರ್ಧರಿಸಿವೆ, ಇದೇ ನೀತಿಯನ್ನು ಭಾರತವೂ ಅಪ್ಪಿಕೊಳ್ಳಲಿದೆಯೇ ಎಂಬುದಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ಇದೇ ನೀತಿಯನ್ನು ಎಲ್ಲಾ ಸಂದರ್ಭಗಳಿಗೂ ಅನ್ವಯಿಸಬೇಕೇ ಎಂಬುದು ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದರು.
ಕಾಂಧಹಾರ್ ವಿಮಾನ ಅಪಹರಣ ಘಟನೆ ವೇಳೆ ಅಧಿಕಾರದಲ್ಲಿದ್ದ ವಾಜಪೇಯಿ ಸರ್ಕಾರ, ವಿಮಾದಲ್ಲಿದ್ದ 150ಮಂದಿಯ ಸುರಕ್ಷೆಯ ಹಿತದೃಷ್ಟಿಯಿಂದ ಜೈಶೇ ಮೊಹಮ್ಮದ್‌ನ ಮುಖ್ಯಸ್ಥ ಮಸೂದ್ ಅಜರ್ ಸೇರಿದಂತೆ ಮೂವರು ಭಾರೀ ಉಗ್ರರನ್ನು ಬಿಡುಗಡೆ ಮಾಡಿದ್ದು, ಆಗಿನ ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್ ಸಿಂಗ್ ಉಗ್ರರನ್ನು ಕಾಂಧಾರ್‌ಗೆ ಕರೆದೊಯ್ದು ಬಿಟ್ಟಿದ್ದರು.
2001ರಲ್ಲಿ ಸಂಸತ್ ಮೇಲೆ ನಡೆಸಲಾದ ದಾಳಿ ಮತ್ತು ಅದೇ ತಿಂಗಳಲ್ಲಿ ಶ್ರೀನಗರದಲ್ಲಿರುವ ಜಮ್ಮು ಕಾಶ್ಮೀರದ ವಿಧಾನಸಭೆಯ ಮೇಲೆ ನಡೆಸಿದ ದಾಳಿಯಲ್ಲೂ ಮಸೂದ್ ಹೆಸರು ಕೇಳಿಬಂದಿದೆ. |