ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ಭಾಷಣದ ಟಿಪ್ಪಣಿಗಳು ಸೇರಿದಂತೆ ಇತರ ಕಾಗದಪತ್ರಗಳು ಪಕ್ಷದ ಕಾರ್ಯಾಗಾರದ ಭೋಜನ ವಿರಾಮದ ವೇಳೆ ಕಾಣೆಯಾಗಿದೆ ಎಂಬುದಾಗಿ ಎನ್ಎಸ್‌ಯುಐ ಗುರುವಾರ ಪೊಲೀಸರಿಗೆ ದೂರು ಸಲ್ಲಿಸಿದೆ.ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಟಿವಿ ಸಿಬ್ಬಂದಿಗಳು ಈ ಕೃತ್ಯ ಎಸಗಿರಬಹುದು ಎನ್ನಲಾಗಿದ್ದು, ಇದರಿಂದಾಗಿ ಅಸಮಾಧಾನಗೊಂಡಿರುವ ರಾಹುಲ್ ದೂರು ನೀಡಲು ಒತ್ತಾಯಿಸಿದ್ದರು. ಕಾಣೆಯಾದ ಕಾಗದ ಪತ್ರಗಳಲ್ಲಿ ಅವರು ಮಂಡಿಸಬೇಕಿದ್ದ ಪ್ರಮುಖ ದಾಖಲೆಯೊಂದು ಸೇರಿತ್ತು. ಎನ್ಎಸ್ಐಯು ಮುಖ್ಯಸ್ಥ ಎಚ್.ವೈ.ಈಡನ್ ಅವರು ಸಂಸತ್ ಬೀದಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಈ ದೂರು ಹೆಚ್ಚಿನದೇನನ್ನೂ ಮಾಡಲಾರದು ಎಂದಿದ್ದರೂ, ವಿಶ್ವಾಸ ದ್ರೋಹವನ್ನು ಸಹಿಸಲಾಗದು ಎಂಬ ಎಚ್ಚರಿಕೆಯ ಸಂದೇಶ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ. ರಾಹುಲ್ ಗಾಂಧಿ ಮಧ್ಯಾಹ್ನ ಬಳಿಕ ಮಾಧ್ಯಮವನ್ನು ಭೇಟಿಯಾಗಲು ನಿರ್ಧರಿಸಿದ್ದರೂ, ಕೆಲವರಿಗೆ ಅವರ ಭಾಷಣ ಹಾಗೂ ಟಿಪ್ಪಣಿಗಳ 'ಸ್ಕೂಪ್' (ಇತರರಿಗಿಂದ ಮೊದಲೇ ಪ್ರಕಟಿಸುವ ಧಾವಂತ) ಬೇಕಿತ್ತು, ಹಾಗಾಗಿ ಇದನ್ನು ಅಪಹರಿಸಿರಬಹುದು ಎಂಬುದಾಗಿ ಕಾಂಗ್ರೆಸ್ ಮೂಲಗಳು ಹೇಳಿವೆ.ಪಕ್ಷಕ್ಕೆ ಅದರಲ್ಲೂ ಯುವ ಘಟಕಗಳಿಗೆ ಪುನಶ್ಚೇತನ ನೀಡುವ ಪ್ರಬಲ ಆಕಾಂಕ್ಷೆ ಹೊಂದಿರುವ ರಾಹುಲ್, ಎನ್ಎಸ್ಐಯುನ ಹಲವು ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ವಿದ್ಯಾವಂತ ಮತ್ತು ವೃತ್ತಿಪರ ವರ್ಗಗಳಲ್ಲಿ ಹೊಸ ಮಜಲನ್ನು ಹುಟ್ಟುಹಾಕುವುದು ಅವರ ಧ್ಯೇಯವಾಗಿದೆ. |