ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಪಕ್ಷಕ್ಕೆ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜರುದ್ದೀನ್ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿ, ವೀರಪ್ಪ ಮೊಯ್ಲಿ ಹಾಗೂ ಡಿ. ಶ್ರೀನಿವಾಸ್ ಅವರನ್ನು ಭೇಟಿಯಾಗಿದ್ದಾರೆ.ಅಜರ್ ಎಲ್ಲಿಂದ ಸ್ಫರ್ಧಿಸಬಹುದು ಎಂಬುದನ್ನು ಪರಿಶೀಲಿಸುವ ಅವಶ್ಯಕತೆ ಇದೆ ಎಂದು ಮೊಯ್ಲಿ ಹೇಳಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ಅಜರ್ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದ್ದರೂ, ಅಜರ್ ಇದುವರೆಗೆ ಒಪ್ಪಿಕೊಂಡಿರಲಿಲ್ಲ. ಅಲ್ಲದೆ ಈ ಕುರಿತು ಪ್ರಶ್ನಿಸಿದ ಪತ್ರಕರ್ತರನ್ನು "ಅದೆಲ್ಲಿಂದ ಇಂತಹ ವದಂತಿಗಳು ಹುಟ್ಟಿಕೊಳ್ಳುತ್ತವೆ" ಎಂದು ಪ್ರಶ್ನಸಿದ್ದರು.ಕಳೆದ ವರ್ಷ ಅಜರ್ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷರನ್ನು ಭೇಟಿಯಾಗಿದ್ದರು. ಆವೇಳೆಗೆ ಅಜರ್ ಟಿಆರ್ಎಸ್ ಸೇರಿಬಿಡುತ್ತಾರೆ ಎಂಬ ಊಹಾಪೋಹಗಳು ಎದ್ದಿದ್ದವು. |