ಶನಿವಾರ ಹೃದಯದ ಶಸ್ತ್ರಕ್ರಿಯೆಗೊಳಪಡಲಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಬೈಪಾಸ್ ಸರ್ಜರಿಗಾಗಿ ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿಯ ವಕ್ತಾರರು ಹೇಳಿದ್ದಾರೆ.ಡಾ| ಮನಮೋಹನ್ ಸಿಂಗ್ ಅವರು ಶನಿವಾರ ಕೊರೊನರಿ ಆರ್ಟರಿ(ಪರಿಧಮನಿ) ಬೈಪಾಸ್ ಗ್ರಾಫ್ಟ್ ಸರ್ಜರಿಗೆ ಒಳಪಡಲಿದ್ದಾರೆ ಎಂದು ಎಐಐಎಂಎಸ್ ವಕ್ತಾರ ದೀಪಕ್ ಸಂಧು ತಿಳಿಸಿದ್ದಾರೆ.76 ರ ಹರೆಯದ ಪ್ರಧಾನಿಯವರ ಹೃದಯದ ರಕ್ತ ಸಂಚಾರದಲ್ಲಿ ತೊಡಕುಂಟಾಗಿರುವ ಕಾರಣ ಈ ಶಸ್ತ್ರಕ್ರಿಯೆ ನಡೆಸಲಾಗುತ್ತಿದೆ.ಎಐಐಎಂಎಸ್‌ನ ವೈದ್ಯರ ತಂಡ ಹಾಗೂ ಮುಂಬೈನ ಏಶ್ಯನ್ ಹಾರ್ಟ್ ಇನ್ಸ್‌ಸ್ಟಿಟ್ಯೂಟ್‌ನ ವೈದ್ಯರು ಶಸ್ತ್ರಕ್ರಿಯೆ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.ಶಸ್ತ್ರಕ್ರಿಯೆಯಿಂದ ಪ್ರಧಾನಿಯವರ ಜೀವಕ್ಕೇನು ಅಪಾಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಪ್ರಣಬ್ ಉಸ್ತುವಾರಿ ಪ್ರಧಾನಿ ಅನುಪಸ್ಥಿತಿಯಲ್ಲಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಸಂಪುಟ ಸಭೆಗಳಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ತೀವ್ರ ಉತ್ಸುಕರಾಗಿದ್ದ ಪ್ರಧಾನಿಯರು, ಸರ್ಜರಿಯಿಂದಾಗಿ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಅತ್ಯಂತ ಕಡಿಮೆ ಎನ್ನಲಾಗಿದೆ. |